Advertisement

ಮ್ಯಾನೇಜ್‌ಮೆಂಟ್‌ ಕತೆಗಳು: ಚಿನ್ನದ್ದು ನಿಮಗೆ, ಬೆಳ್ಳಿಯದು ನನಗೆ!

03:55 AM Jan 02, 2017 | Karthik A |

ಆಫೀಸ್‌ನಲ್ಲಿ ನಮಗಿಂತ ಕೆಳಗಿನವರು ಮಾಡುವ ತಪ್ಪಿಗೆ ಆತುರದಲ್ಲಿ ಶಿಕ್ಷೆ ಕೊಡುವ ಮೊದಲು ಒಮ್ಮೆ ನಮ್ಮನ್ನು ಅವರ ಜಾಗದಲ್ಲಿರಿಸಿ ನೋಡುವುದು ಒಳ್ಳೆಯದು. ಒಬ್ಬನ ತಪ್ಪನ್ನು ಜನರಲೈಸ್‌ ಮಾಡಿ ಎಲ್ಲರನ್ನೂ ಅವನಂತೆ ನೋಡುವುದು ದೊಡ್ಡ ತಪ್ಪು. ಆಗ ಅಂತಹ ತಪ್ಪು ಮಾಡಿದವರ ಪಟ್ಟಿಯಲ್ಲಿ ನಾವೂ ಸೇರಬಹುದು.

Advertisement

ಅಕ್ಬರ್‌ ಬಹಳ ಸಿಟ್ಟಾಗಿದ್ದ. ದರ್ಬಾರಿಗೆ ಬಂದು ಕುಳಿತವನು ಎಂದಿನಂತಿಲ್ಲದೆ ಒಂದಷ್ಟು ಸಭಾಸದರಿಗೆ ಹಿಗ್ಗಾಮುಗ್ಗಾ ಬೈದು ಎದ್ದುಹೋದ. ಎಲ್ಲರೂ ಗೊಂದಲಕ್ಕೆ ಬಿದ್ದರು. ನಂತರ ಅಕ್ಬರ್‌ ಏಕಾಂತದಲ್ಲಿದ್ದಾಗ ಬೀರಬಲ್‌ ಹೋಗಿ ‘ನಿಮ್ಮ ಸಿಟ್ಟಿಗೆ ಏನು ಕಾರಣ’ ಎಂದು ಕೇಳಿದ. ‘ಏನೂಂತ ಹೇಳಲಿ ಬೀರಬಲ್‌. ನನ್ನ ಅಳಿಯ ಒಬ್ಬ ನಾಲಾಯಕ್‌ ಮನುಷ್ಯ. ಒಂದು ವರ್ಷದಿಂದ ನನ್ನ ಮಗಳನ್ನು ತವರಿಗೆ ಕಳಿಸಿಲ್ಲ. ನನಗೆ ಅವಳನ್ನು ನೋಡಬೇಕು ಅಂತ ತುಂಬಾ ಆಸೆಯಾಗಿದೆ. ಏನು ಮಾಡಲಿ?’

‘ಇದು ಬಹಳ ಸರಳ ಸಮಸ್ಯೆ. ನಾನು ಈಗಲೇ ಯಾರನ್ನಾದರೂ ಕಳಿಸಿ ತಮ್ಮ ಮಗಳನ್ನು ಕರೆಸುವ ವ್ಯವಸ್ಥೆ ಮಾಡ್ತೇನೆ.’

‘ಈ ಕೆಲಸವನ್ನು ನಾನು ಮಾಡಿಲ್ಲ ಅಂದುಕೊಂಡೆಯಾ? ನಾನು ಯಾರನ್ನಾದ್ರೂ ಕಳಿಸಿದರೆ ಅವರಿಗೆ ನನ್ನ ಅಳಿಯ ಹೊಡೆದು ಕಳಿಸ್ತಾನೆ. ಮಹಾನ್‌ ನೀಚ ಅವನು.’

ಬೀರಬಲ್‌ ಇದಕ್ಕೆ ಪರಿಹಾರ ಹುಡುಕುವುದು ಹೇಗೆಂದು ಯೋಚಿಸತೊಡಗಿದ. ಅಷ್ಟರಲ್ಲಿ ಅಕ್ಬರ್‌ ಒಂದು ಭಯಂಕರ ಪರಿಹಾರ ಹೇಳಿಬಿಟ್ಟ. 

Advertisement

‘ಬೀರಬಲ್‌, ಈಗಲೇ ಸಾಮೂಹಿಕ ನೇಣುಗಂಬಗಳನ್ನು ಸಿದ್ಧ ಮಾಡಿಸು. ಇನ್ನೊಂದು ವಾರದಲ್ಲಿ ನಮ್ಮ ರಾಜ್ಯದಲ್ಲಿರುವ ಎಲ್ಲಾ ಅಳಿಯಂದಿರನ್ನೂ ಗಲ್ಲಿಗೇರಿಸುವ ಆದೇಶ ಹೊರಡಿಸ್ತೇನೆ. ಅಳಿಯಂದಿರೆಲ್ಲ ಸಾಯ್ಲಿ ನನ್‌ ಮಕ್ಳು’ ಎಂದು ಕಿಡಿ ಕಾರಿ ಹೊರಟುಹೋದ.

ಇದು ಅತಿಯಾಯ್ತು ಎಂದು ಬೀರಬಲ್‌ ಗೊಣಗಿಕೊಂಡರೂ ರಾಜಾಜ್ಞೆ ಮೀರುವಂತಿರಲಿಲ್ಲ. ರಾಜಧಾನಿಯ ಹೊರವಲಯದ ದೊಡ್ಡ ಬಯಲಿನಲ್ಲಿ ಸಾಮೂಹಿಕ ನೇಣುಗಂಬಗಳನ್ನು ನೆಡಿಸಿದ. ನಾಲ್ಕು ದಿನದ ನಂತರ ಸಿದ್ಧತೆ ತೋರಿಸಲು ಅಕ್ಬರ್‌ನನ್ನು ಕರೆದುಕೊಂಡು ಹೋದ. ಎಲ್ಲಾ ವ್ಯವಸ್ಥೆ ಬಹಳ ಚೆನ್ನಾಗಿ ಮಾಡಿದ್ದೀಯಾ ಬೀರಬಲ್‌. ಆದರೆ ಈ ಚಿನ್ನ ಮತ್ತು ಬೆಳ್ಳಿಯ ನೇಣುಗಂಬ ಯಾರಿಗೆ ಎಂದು ಅಕ್ಬರ್‌ ಕೇಳಿದ.

‘ನೀವು ರಾಜ ಅಲ್ವಾ? ಚಿನ್ನದ್ದು ನಿಮಗೆ. ನಾನು ಮಂತ್ರಿಯಲ್ವಾ? ನನಗೆ ಬೆಳ್ಳಿಯದು.’

‘ ಅಯ್ಯೋ ನಮಗ್ಯಾಕೆ? ಇದು ಅಳಿಯಂದಿರನ್ನು ಗಲ್ಲಿಗೇರಿಸೋದಕ್ಕೆ.’

‘ಹುಜೂರ್‌, ನಾವೂ ನಮ್ಮ ಅತ್ತೆ-ಮಾವಂದಿರಿಗೆ ಅಳಿಯಂದ್ರೇ ಅಲ್ವಾ? ರಾಜ್ಯದ ಎಲ್ಲಾ ಅಳಿಯಂದಿರನ್ನೂ ಗಲ್ಲಿಗೇರಿಸಬೇಕು ಅಂದ್ರೆ ನಮ್ಮನ್ನೂ ಗಲ್ಲಿಗೇರಿಸಬೇಕಲ್ವಾ?’ ಅಕ್ಬರ್‌ಗೆ ತಪ್ಪಿನ ಅರಿವಾಯಿತು.
 

– ಸೀಮ

Advertisement

Udayavani is now on Telegram. Click here to join our channel and stay updated with the latest news.

Next