ಬರೇಲಿ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ತಲೆ ಕಡಿಯುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಶರ್ಮಾ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿರುವ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಬಂಧನ ಮಾಡಲಾಗಿದೆ.
“ನಾಸಿರ್ ಹುಸೇನ್ ಎಂಬಾತನನ್ನು ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಕ್ಕಾಗಿ ನಾವು ಬಂಧಿಸಿದ್ದೇವೆ. ಆರೋಪಿಯನ್ನು ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ಸಾವಾನ್ ಪ್ರದೇಶದ ಮನೆಯಿಂದ ಬಂಧಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಆರೋಪಿಯ ವಿರುದ್ಧ ಫರೀದ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದಿಂದ ಯಾವುದೇ ಚಟುವಟಿಕೆ ಅಥವಾ ಕಾಮೆಂಟ್‌ಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ನಿರ್ದೇಶನ ನೀಡಿದ ಕೆಲವು ದಿನಗಳ ನಂತರ ಬಂಧನವಾಗಿದೆ.
ಸುದ್ದಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ನೂಪುರ್ ಶರ್ಮಾ ವಿವಾದ ಎದುರಿಸುತ್ತಿದ್ದು, ಪಕ್ಷದಿಂದ ಹೊರ ಹಾಕಲಾಗಿದೆ.