ಡಿಸ್ಪುರ: ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ‘ ಸಿಗರೇಟ್ ಸೇದುವ ಕಾಳಿ’ ಪೋಸ್ಟರ್ ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾದ ನಡುವೆ, ಅಸ್ಸಾಂನ ನಾಗಾಂವ್ ನಲ್ಲಿ ಪುರುಷ ಮತ್ತು ಮಹಿಳೆಯೊಬ್ಬರು ಶಿವ ಮತ್ತು ಪಾರ್ವತಿ ದೇವಿಯ ವೇಷಧರಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಹೊಸ ವಿವಾದ ಭುಗಿಲೆದ್ದಿದೆ.
ಈ ಘಟನೆಯು ಹಿಂದೂ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ನಾಗಾವ್ ಜಿಲ್ಲಾ ಘಟಕಗಳಿಂದ ತೀವ್ರ ಖಂಡನೆಗೆ ಕಾರಣವಾಯಿತು.
ಶನಿವಾರ ಸಂಜೆ ಇಬ್ಬರು ಶಿವ ಮತ್ತು ಪಾರ್ವತಿಯ ವೇಷ ಧರಿಸಿ ರಸ್ತೆಗಿಳಿದು ಇಂಧನ, ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದ್ದರು. ಇಬ್ಬರೂ ಬೈಕ್‌ನಲ್ಲಿ ನಾಗಾವ್‌ನ ಕಾಲೇಜು ಚೌಕ್‌ಗೆ ಆಗಮಿಸಿ ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಶಿವನ ವೇಷಧಾರಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು. ಅಲ್ಲದೆ ಜನರು ಬೀದಿಗಿಳಿದು ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ರಿಕಿ ಪಾಂಟಿಂಗ್ ಸಾರ್ವಕಾಲಿಕ ದಾಖಲೆ ಸರಿಗಟ್ಟುವ ಸನಿಹದಲ್ಲಿ ರೋಹಿತ್ ಶರ್ಮಾ
ಇದಾದ ಬಳಿಕ ಬಡಾ ಬಜಾರ್ ಪ್ರದೇಶಕ್ಕೆ ಆಗಮಿಸಿದ ಇವರು ಇದೇ ರೀತಿ ಬೀದಿ ನಾಟಕ ಪ್ರದರ್ಶಿಸಿದರು. ಇದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಗಮನಕ್ಕೆ ಬಂದಿದ್ದು, ಇವರಿಬ್ಬರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇವರ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಿವ ವೇಷಧಾರಿ ಬಿರಿಂಚಿ ಬೋರಾನನ್ನು ಬಂಧಿಸಲಾಗಿದೆ.