ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಹೀನಾ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಕಪಿಲ್ ಗುಜ್ಜಾರ್ ಆಮ್ ಆದ್ಮಿ ಪಕ್ಷದ ಸದಸ್ಯ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಕಪಿಲ್ ಈ ವಿಚಾರವನ್ನು ಪೊಲೀಸರು ಮುಂದೆ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮಾಹಿತಿ ಮೂಲಗಳು ತಿಳಿಸಿವೆ. 2019ರ ಪ್ರಾರಂಭದಲ್ಲಿ ಕಪಿಲ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮತ್ತು ಆತನ ಮೊಬೈಲ್ ಫೋನಿನಲ್ಲಿ ಕಪಿಲ್ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರೊಂದಿಗಿದ್ದ ಫೊಟೋಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.
ಆದರೆ ಶೂಟಿಂಗ್ ಆರೋಪಿ ಕಪಿಲ್ ಗೆ ತಮ್ಮ ಪಕ್ಷದ ಜೊತೆ ಇರುವ ಸಂಬಂಧವನ್ನು ಆಮ್ ಆದ್ಮಿ ಪಕ್ಷದ ಮುಖಂಡರು ಬಲವಾಗಿ ನಿರಾಕರಿಸಿದ್ದಾರೆ. ಆದರೆ ತಾನು ಮಾತ್ರವಲ್ಲದೇ ತನ್ನ ತಂದೆ ಗಜೆ ಸಿಂಗ್ ಅವರೂ ಸಹ ಆಪ್ ಸದಸ್ಯ ಎಂಬ ಮಾಹಿತಿಯನ್ನು ಕಪಿಲ್ ವಿಚಾರಣೆಯ ಸಂದರ್ಭದಲ್ಲಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಕಪಿಲ್ ತಂದೆ 2012ರಲ್ಲಿ ನಡೆದಿದ್ದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಬಿ.ಎಸ್.ಪಿ. ಟಿಕೆಟ್ ಪಡೆದು ಸ್ಪರ್ಧಿಸಿದ್ದಾಗಿಯೂ ಕಪಿಲ್ ಇದೇ ಸಂದರ್ಭದಲ್ಲಿ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ.
ಕಪಿಲ್ ಮೊಬೈಲ್ ನಿಂದ ಪೊಲೀಸರು ವಶಪಡಿಸಿಕೊಂಡಿರುವ ಫೊಟೋಗಳಲ್ಲಿ ಕಪಿಲ್ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಾಗಿರುವ ಸಂಜಯ್ ಸಿಂಗ್ ಮತ್ತು ಆತಿಶಿ ಅವರೊಂದಿಗಿರುವ ಫೊಟೋಗಳು ಇವೆ. ಕಪಿಲ್ ಮತ್ತು ಆತನ ತಂದೆಗೆ ಆಮ್ ಆದ್ಮಿ ಪಕ್ಷದ ಸಂಪರ್ಕ ಇರುವ ವಿಚಾರವನ್ನು ದೆಹಲಿ ಕ್ರೈ ಬ್ರ್ಯಾಂಚ್ ಪೊಲೀಸರು ನ್ಯಾಯಾಲಕ್ಕೂ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.