ಬಂಟ್ವಾಳ: ನೀವು ಅಷ್ಟು ಲಕ್ಷ ಹಣವನ್ನು ಬಹುಮಾನವಾಗಿ ಪಡೆದಿದ್ದೀರಿ, ಮೊದಲು ಇಷ್ಟು ಹಣ ಕಟ್ಟಿ ಎಂದು ಕರೆ ಮಾಡಿ ನಂಬಿಸಿ ಮೋಸ ಮಾಡುವವರ ಬಗ್ಗೆ ನಾವು ಕೇಳಿದ್ದೇವೆ, ಪತ್ರಿಕೆಗಳಲ್ಲಿ ಓದಿದ್ದೇವೆ. ಆದರೆ ಇಲ್ಲೊಬ್ಬ ಅಸಾಮಿ ‘ಕೋವಿಡ್ ನ ಪರಿಹಾರ ಹಣ ಬಂದಿದೆ’ ಎಂದು ವೃದ್ಧಮಹಿಳೆಗೆ ನಂಬಿಸಿ ಆಕೆಯ ಬಂಗಾರದ ಒಡವೆ ದೋಚಿದ ಘಟನೆ ಸೋಮವಾರ ಬೆಳಿಗ್ಗೆ ವರದಿಯಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ನಲ್ಲಿ. ಅದೂ ಕೂಡಾ ಮಿನಿ ವಿಧಾನಸೌಧದಲ್ಲಿ!
ಅಪರಿಚತನು ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಎಂಬವರ ಕಿವಿಯಲ್ಲಿದ್ದ ಬೆಂಡೋಲೆಯನ್ನು ಮೋಸದಿಂದ ಎಗರಿಸಿ ಪರಾರಿಯಾಗಿದ್ದಾನೆ.
ಜಯಂತಿ ಅವರು ಇಂದು ಬೆಳಿಗ್ಗೆ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಗೆ ವಿದ್ಯುತ್ ಬಿಲ್ ಪಾವತಿ ಮಡಲು ಬಂದಿದ್ದರು. ಬಿಲ್ ಪಾವತಿ ಮಾಡಿ ವಾಪಸು ತೆರಳುವ ವೇಳೆ ಅನಾಮಿಕ ವ್ಯಕ್ತಿಯೋರ್ವ ಮಹಿಳೆಯಲ್ಲಿ ಪರಿಚಯ ಮಾಡಿಕೊಂಡು ತಾನು ಶೀನಪ್ಪ ಅವರ ಮಗ ಸಂತೋಷ ಎಂದು ನಂಬಿಸಿ ನಿಮಗೆ ಕೋವಿಡ್ ನಿಂದಾಗಿ ಒಂದೂವರೆ ಲಕ್ಷ ಹಣ ಪರಿಹಾರವಾಗಿ ಬಂದಿದೆ. ಅದನ್ನು ಪಡೆಯಲು ಕನಿಷ್ಟ ಹತ್ತು ಸಾವಿರ ಹಣ ಕಟ್ಟಬೇಕಾಗುತ್ತದೆ. ನೀವು ಆಧಾರ್ ಕಾರ್ಡ್ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾನೆ.
ಇದನ್ನೂ ಓದಿ:ರಕ್ತರಹಿತ ಬಕ್ರೀದ್, ಪಟಾಕಿ ಇಲ್ಲದ ಹೊಸವರ್ಷವೂ ಬರಲಿ: ಪಟಾಕಿ ನಿಷೇಧಕ್ಕೆ ಯತ್ನಾಳ ಆಕ್ರೋಶ
ಮಹಿಳೆ ಆಧಾರ್ ಕಾರ್ಡ್ ತಂದಿಲ್ಲ ಎಂದಾಗ ನೀವು ಮಿನಿ ವಿಧಾನಸೌಧಕ್ಕೆ ಬನ್ನಿ, ಅಲ್ಲಿ ಅರ್ಜಿ ನೀಡಬೇಕು ಎಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಹತ್ತು ಸಾವಿರ ಕೇಳಿದಾಗ ನನ್ನ ಬಳಿ ಇಲ್ಲ ಮಗನ ಕೇಳಿ ಕೊಡುತ್ತೇನೆ ಎಂದು ಮಹಿಳೆ ಹೇಳಿದಾಗ, “ಮಗನಿಗೆ ನಾನು ಪೋನ್ ಮಾಡಿದೆ, ಅವನಲ್ಲಿ ಹಣ ಇಲ್ಲವಂತೆ, ನಿಮ್ಮಲ್ಲಿರುವ ಕಿವಿಯ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ” ಎಂದು ಮಹಿಳೆಯನ್ನು ನಂಬಿಸಿದ್ದಾನೆ.
ಆತನ ಮಾತುಗಳನ್ನು ನಂಬಿದ ಆಕೆ ಕೂಡಲೇ ಕಿವಿಯ ಬೆಂಡೋಲೆಯನ್ನು ತೆಗೆದು ಕೊಟ್ಟಿದ್ದಾರೆ. ಆದರೆ ಬಂಗಾರ ಪಡೆದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿ ಬಂಗಾರ ಪಡೆದು ಹೋದ ಮೇಲೆ ಮಹಿಳೆ ಮಿನಿ ವಿಧಾನಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮಗನಿಗೆ ತಾಯಿಯನ್ನು ಮೋಸಗೊಳಿಸಿ ಬಂಗಾರ ಎಗರಿಸಿರುವ ಬಗ್ಗೆ ತಿಳಿದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಮಿನಿ ವಿಧಾನಸೌಧದಲ್ಲಿರುವ ಸಿ.ಸಿ.ಕ್ಯಾಮರಾದಲ್ಲಿ ಆರೋಪಿಯ ಪತ್ತೆ ಕಾರ್ಯಮುಂದುವರಿದಿದೆ.