ಪ್ಯಾರಿಸ್ : ಸೈನಿಕನ ಕೈಯಿಂದ ಬಂದೂಕನ್ನು ಕಿತ್ತುಕೊಂಡ ವ್ಯಕ್ತಿಯೋರ್ವನನ್ನು ಪ್ಯಾರಿಸ್‌ನ ಓರ್ಲಿ ವಿಮಾನ ನಿಲ್ದಾಣದಲ್ಲಿ ಇಂದು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಒಳಾಡಳಿತ ಸಚಿವಾಲಯ ಹೇಳಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅದು ತಿಳಿಸಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 8.30ರ ಹೊತ್ತಿಗೆ ಈ ಶೂಟಿಂಗ್ ಘಟನೆ ನಡೆದೊಡನೆಯೇ ವಿಮಾನ ನಿಲ್ದಾಣವನ್ನು ತೆರವುಗೊಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
“ವ್ಯಕ್ತಿಯೊಬ್ಬ ಸೈನಿಕನ ಕೈಯಿಂದ ಬಂದೂಕನ್ನು ಕಿತ್ತುಕೊಂಡು ವಿಮಾನ ನಿಲ್ದಾಣದ ಅಂಗಡಿಯೊಂದರಲ್ಲಿ ಅಡಗಿ ಕುಳಿತ. ಕೂಡಲೇ ಆತನನ್ನು ಶೋಧಿಸಿ ಗುಂಡಿಕ್ಕಿ ಸಾಯಿಸಲಾಯಿತು’ ಎಂದು ಒಳಾಡಳಿತ ಸಚಿವಾಲಯದ ವಕ್ತಾರರೋರ್ವರು ತಿಳಿಸಿದ್ದಾರೆ.
ದಕ್ಷಿಣ ಪ್ಯಾರಿಸ್ ಹೊರವಲಯದಲ್ಲಿರುವ ಓರ್ಲಿ ವಿಮಾನ ನಿಲ್ದಾಣಕ್ಕೆ ಒಳಾಡಳಿತ ಸಚಿವ ಬ್ರೂನೋ ಲಿ ರಾಕ್ಸ್ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಸೈನಿಕನಿಂದ ಬಂದೂಕು ಕಿತ್ತುಕೊಂಡು ಹತನಾದ ವ್ಯಕ್ತಿಯು ಯಾರು, ಆತನ ಉದ್ದೇಶ ಏನಿತ್ತು, ಆತ ಯಾವುದೇ ಭಯೋತ್ಪಾದಕ ಸಂಘಟನೆಗೆ ಸೇರಿದವನೇ ಎಂಬಿತ್ಯಾದಿ ವಿಷಯಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ.