ಬೆಂಗಳೂರು: ಮಧ್ಯರಾತ್ರಿಯಲ್ಲಿ ವಿಧಾನಸೌಧ ವೀಕ್ಷಣೆಗೆ ಹೋಗಿದ್ದ ಸ್ನೇಹಿತರ ಬೈಕ್ ಅಪಘಾತವಾಗಿದ್ದು, ಒಬ್ಬ ಮೃತಪಟ್ಟಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಠಾಣೆ ವ್ಯಾಪ್ತಿಯ ಸೆವೆನ್ಸ್ ಮಿನಿಸ್ಟರ್ ಕ್ವಾರ್ಟರ್ಸ್ ಬಳಿ ನಡೆದಿದೆ.
ಯಶವಂತಪುರದ ಸುಭೇದಾರ್ ಪಾಳ್ಯ ನಿವಾಸಿ ರಾಜೇಶ್ ಆಚಾರ್ಯ (28) ಮೃತ ಬೈಕ್ ಸವಾರ. ಹಿಂಬದಿ ಸವಾರ ಪರುಶು ರಾಮ್‌ಗೆ(29) ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಆಚಾರ್ಯ ಸೋಮವಾರ ನಸುಕಿನ 2 ಗಂಟೆ ಸುಮಾರಿಗೆ ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ್ ಜತೆ ವಿಧಾನಸೌಧ ವೀಕ್ಷಣೆಗೆಂದು ಬಂದಿದ್ದಾರೆ. ಹೈಗ್ರೌಂಡ್ಸ್ ಜಂಕ್ಷನ್ ಕಡೆಯಿಂದ ವಿಂಡ್ಸರ್ ಮ್ಯಾನರ್ ಕಡೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಹೋಗುವಾಗ ಆಯ ತಪ್ಪಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಬಳಿ ಕೆಳಗೆ ಬಿದ್ದಿದ್ದು, ಇಬ್ಬರಿಗೂ ಗಂಭೀರ ಗಾಯವಾಗಿದೆ. ಕೂಡಲೇ ಇಬ್ಬರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆ ರಾಜೇಶ್ ಆಚಾರ್ಯ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದರು.
ಇನ್ನು ಪರಶುರಾಮ್ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯು ತ್ತಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.