ಕೊಚ್ಚಿ : ಅಮೇಜಾನ್ ನಲ್ಲಿ
ಆಪಲ್ ಐಫೋನ್ 12 ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು ಪ್ಯಾಕ್ ನಲ್ಲಿ ಬಂದ ಪಾತ್ರೆ ತೊಳೆಯುವ ಸಾಬೂನು ಮತ್ತು 5 ರೂ ನಾಣ್ಯ ಕಂಡು ದಂಗಾಗಿ ಹೋದ ಘಟನೆ ನಡೆದಿದೆ.
ಕೇರಳದ ಅಲುವಾ ಎಂಬಲ್ಲಿನ ನೂರುಲ್ ಅಮೀನ್ ಎನ್ನುವವರು ಐಫೋನ್ ಆರ್ಡರ್ ಮಾಡಿ ಕೈಗೆ ಸಿಗುವುದನ್ನೇ ಎದುರು ನೋಡುತ್ತಿದ್ದರು. ಕೊನೆಗೂ ಡೆಲಿವರಿ ಪಡೆದು ಸಂಭ್ರಮಿಸುತ್ತಾ ಪ್ಯಾಕೆಟ್ ಬಿಚ್ಚಿ ನೋಡಿದಾಗ ಸಿಕ್ಕಿದ್ದು ವಿಮ್ ಸಾಬೂನು ಮತ್ತು 5 ರುಪಾಯಿಯ ನಾಣ್ಯ ಮಾತ್ರ.
ಪ್ಯಾಕ್ ಬಿಚ್ಚುವಾಗ ವಿಡಿಯೋ ಮಾಡಿಕೊಂಡಿದ್ದು, ವಿಮ್ ಸೋಪು ಮತ್ತು5 ರುಪಾಯಿಯ ನಾಣ್ಯವಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
70,900.ರುಪಾಯಿಯ ಐಫೋನ್ ಬದಲಾಗಿ ಸಾಬೂನು ಬಂದಿದ್ದಕ್ಕೆ ಕಂಗಾಲಾದ ಎನ್ಆರ್ ಐ ಆಗಿರುವ ನೂರುಲ್ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧಿಕಾರಿಗಳು ಅಮೆಜಾನ್ ಅಧಿಕಾರಿಗಳು ಮತ್ತು ಹೈದರಾಬಾದ್ ಮೂಲದ ವ್ಯಾಪಾರಸ್ಥರನ್ನು ಸಂಪರ್ಕಿಸಿದಾಗ ಅಚ್ಚರಿ ಕಾದಿತ್ತು. ನೂರುಲ್ ಅವರು ಆರ್ಡರ್ ಮಾಡಿದ್ದ ಫೋನ್ ಅದಾಗಲೇ ಝಾರ್ಖಂಡ್ ನ ವ್ಯಕ್ತಿಯೊಬ್ಬರು ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಫೋನ್ ಔಟ್ ಆಫ್ ಸ್ಟಾಕ್ ಆಗಿತ್ತು, ನೂರುಲ್ ಅವರಿಗೆ ಹಣವನ್ನು ವಾಪಸ್ಸು ನೀಡುವುದಾಗಿ ಹೈದರಾಬಾದ್ ಮೂಲದ ವ್ಯಾಪಾರಸ್ಥರು ಹೇಳಿರುವುದಾಗಿ ತಿಳಿದು ಬಂದಿದೆ.
ಸೆಪ್ಟೆಂಬರ್ 25 ರಿಂದಲೇ ಫೋನ್ ಬಳಕೆಯಾಗುತ್ತಿತ್ತಾದರೂ ಅಕ್ಟೋಬರ್ ನಲ್ಲಿ ಆರ್ಡರ್ ಪಡೆದಿರುವುದು ವ್ಯಾಪಾರಸ್ಥರ ತಪ್ಪಾಗಿದೆ.