Advertisement

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಉಕ್ಕುವ ಮ್ಯಾನ್‌ ಹೋಲ್‌ ನಿತ್ಯದರ್ಶನ

10:03 AM Dec 11, 2019 | Hari Prasad |

ಉಡುಪಿ: ಮ್ಯಾನ್‌ ಹೋಲ್‌ಗ‌ಳೋ ಅಥವಾ ಮರಣಶಯ್ಯೆ ದಿಬ್ಬಗಳೋ! ಇವುಗಳನ್ನು ಏನೆಂದು ಹೆಸರಿಸಿದರೆ ಸೂಕ್ತ ಎನ್ನುವ ಜಿಜ್ಞಾಸೆ ನಗರವಾಸಿಗಳನ್ನು ಕಾಡುತ್ತಿದೆ. ನೆಲದೊಳಗೆ ‘ಗುಪ್ತಗಾಮಿನಿ’ಯಂತೆ ಹರಿಯುವ ಒಳಚರಂಡಿ ನೀರು ಆಗಾಗ ಯುಜಿಡಿ ಕೊಳವೆ ಮಾರ್ಗ ಎಲ್ಲೋ ಒಂದು ಕಡೆ ಬಂದಾಗಿ, ಮ್ಯಾನ್‌ ಹೋಲ್‌ಗ‌ಳ ಮೂಲಕ ಕೊಳಚೆ ನೀರು ರಸ್ತೆ ಮೇಲೆ ಉಕ್ಕಿ ಹರಿಯುತ್ತದೆ.

Advertisement

ಉಡುಪಿ ನಗರಸಭಾ ವ್ಯಾಪ್ತಿಯ 35ವಾರ್ಡ್‌ಗಳಲ್ಲಿ ಸುಮಾರು 2,000 ಅಧಿಕ ಮ್ಯಾನ್‌ ಹೋಲ್‌ಗ‌ಳಿವೆ. ಪ್ರತಿ ವಾರ್ಡ್‌ಗೆ ಸುಮಾರು 100 ಮ್ಯಾನ್‌ಹೋಲ್‌ಗ‌ಳಿದ್ದು, ನಿತ್ಯ ಒಂದಲ್ಲೊಂದು ಮ್ಯಾನ್‌ ಹೋಲ್‌ಗ‌ಳಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿದೆ.

ಮ್ಯಾನ್‌ ಹೋಲ್‌ಗ‌ಳಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿರುವ ಕುರಿತು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರೂ ಮ್ಯಾನ್‌ಹೋಲ್‌ ದುರಸ್ತಿ 8 ರಿಂದ 10ದಿನ ತೆಗೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ತಿಂಗಳಾದರೂ ದುರಸ್ತಿ ಮಾಡದ ನಿದರ್ಶನಗಳು ಇದೆ. ಇದರಿಂದಾಗಿ ಇಡೀ ಪ್ರದೇಶ ದುರ್ವಾಸನೆ ಬೀರುತ್ತಿದ್ದು, ಕೊಳಚೆ ನೀರಿನಿಂದ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ.

ಒಂದು ಯಂತ್ರ : 35 ವಾರ್ಡ್‌
ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಸುಮಾರು 2000 ಮ್ಯಾನ್‌ ಹೋಲ್‌ಗ‌ಳನ್ನು ದುರಸ್ತಿಗೊಳಿಸಲು ಇರುವುದು ಕೇವಲ ಒಂದು ಜೆಟ್ಟಿಂಗ್‌ ಯಂತ್ರ. ಪ್ರಸ್ತುತ ನಗರಸಭೆಯ ಜೆಟ್ಟಿಂಗ್‌ ಯಂತ್ರದ ಹಳೆಯದಾಗಿದೆ. ಈ ಯಂತ್ರ ಒಂದು ಬ್ಲಾಕೇಜ್‌ ಸರಿಪಡಿಸಲು ಸುಮಾರು ಒಂದು ತಾಸು ತೆಗೆದುಕೊಳ್ಳುತ್ತಿದೆ. ಈ ಯಂತ್ರ ಆಗಿಂದಾಗ್ಗೆ ಹಾಳಾಗುತ್ತಿರುವುದರಿಂದ ಮ್ಯಾನ್‌ ಹೋಲ್‌ಗ‌ಳ ಬ್ಲಾಕೇಜ್‌ ಸರಿ ಪಡಿಸಲು ವಿಳಂಬವಾಗುತ್ತಿದೆ ಎನ್ನುವ ಆರೋಪಗಳಿವೆ.

ಸಾಂಕ್ರಾಮಿಕ ರೋಗದ ಭೀತಿ
ಕೆಲವೊಂದು ಮ್ಯಾನ್‌ಹೋಲ್‌ ಸಮೀಪದಲ್ಲಿ ಮನೆಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಮ್ಯಾನ್‌ ಹೋಲ್‌ ಗ‌ಳು ಸೊಳ್ಳೆ ಉತ್ಪಾದಕ ಕೇಂದ್ರವಾಗಿ ಪರಿಣಮಿಸಿದೆ.

Advertisement

ಸಾವಿನ ಗುಂಡಿ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಉತ್ತಮ ರಸ್ತೆಗಳನ್ನು ಈಗಿನ ಪರಿಸ್ಥಿತಿಯಲ್ಲಿ ಬ್ಯಾಟರಿ ಬೆಳಕಿನಲ್ಲಿ ಹುಡುಕುವ ಪರಿಸ್ಥಿತಿ ಇದೆ. ಇಂತಹ ರಸ್ತೆಗಳಲ್ಲಿ ಅಲ್ಲಲ್ಲಿ ತಲೆಎತ್ತಿರುವ ಮ್ಯಾನ್‌ ಹೋಲ್‌ ಗ‌ಳು ರಸ್ತೆ ಮಟ್ಟಕ್ಕಿಂತ 3 ಇಂಚಿನಿಂದ ಅರ್ಧ ಅಡಿ, ಕೆಲವು ಕಡೆ ಒಂದು ಅಡಿವರೆಗೂ ಮೇಲ್ಮಟ್ಟದಲ್ಲಿವೆ.

ಇನ್ನೂ ಕೆಲವು ಕಡೆ ರಸ್ತೆ ಮಟ್ಟಕ್ಕಿಂತ ಅರ್ಧ ಅಡಿ ಆಳಕ್ಕೆ ‘ಸಾವಿನ ಗುಂಡಿ’ಯಂತೆ ಇವೆ. ಬೇಸಗೆ ಮತ್ತು ಹಗಲು ವೇಳೆ ಇಂತಹ ಗುಂಡಿಗಳನ್ನು ನೋಡಿಕೊಂಡು ಎಚ್ಚರದಿಂದ ವಾಹನ ಚಲಾಯಿಸಬಹುದು. ರಾತ್ರಿ ವೇಳೆ ಮತ್ತು ಮಳೆ ಸುರಿಯುತ್ತಿದ್ದಾಗ ಮ್ಯಾನ್‌ ಹೋಲ್‌ ಗ‌ಳ ಗುಂಡಿಗಳಿಂದ ಬೈಕ್‌ ಸವಾರರು, ವಾಹನ ಚಾಲಕರು ಹಾಗೂ ಪಾದಚಾರಿಗಳನ್ನು ದೇವರೇ ಕಾಪಾಡಬೇಕು.

ಸಾರ್ವಜನಿಕರ ಜವಾಬ್ದಾರಿ ಮುಖ್ಯ
ಸಾರ್ವಜನಿಕರಿರ ಮನೆಯಿಂದ ಡ್ರೈನೇಜ್‌ ಪೈಪ್‌ ಲೈನ್‌ಗೆ ಸಂಪರ್ಕ ಪಡೆಯುವಾಗ ಜಾಲಿಗಳನ್ನು ಆಳವಡಿಸಬೇಕು. ಇದರಿಂದಾಗಿ ಘನ ವಸ್ತುಗಳು ನೇರವಾಗಿ ಡ್ರೈನೇಜ್‌ ಪೈಪ್‌ಲೈನ್‌ ಸೇರುವುದು ತಪ್ಪುತ್ತದೆ.

ಪ್ರಸ್ತುತ ಸಾರ್ವಜನಿಕರು ಘನ ತ್ಯಾಜ್ಯಗಳನ್ನು ಡ್ರೈನೇಜ್‌ ಬಿಡುತ್ತಿರುವುದರಿಂದ ಮ್ಯಾನ್‌ ಹೋಲ್‌ ಗ‌ಳು ಉಕ್ಕಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಇಲ್ಲವಾದರೆ ಮುಂದೊಂದು ದಿನದ ಡ್ರೈನೇಜ್‌ ಪೈಪ್‌ಗಳಲ್ಲಿ ಕೊಳಚೆ ನೀರು ಬದಲಾಗಿ ಮನೆ ಘನ ತ್ಯಾಜ್ಯಗಳ ರಾಶಿ ಇರಲಿದೆ.

ಶೀಘ್ರವಾಗಿ ದುರಸ್ತಿಗೊಳಿಸಿ
ವಾರ ಕಳೆದರೂ ಮ್ಯಾನ್‌ಹೋಲ್‌ಗ‌ಳ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ. ಜನರ ಸಮಸ್ಯೆ ಶೀಘ್ರದಲ್ಲಿ ಸ್ಪಂದಿಸುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಉತ್ತಮ. ಶೀಘ್ರವಾಗಿ ಮ್ಯಾನ್‌ಹೋಲ್‌ಗ‌ಳ ಅವ್ಯವಸ್ಥೆಗೆ ಮುಕ್ತಿ ನೀಡಿ.
– ರಾಮಕೃಷ್ಣ , ಬನ್ನಂಜೆ

ಕಲ್ಸಂಕ ಗುಂಡಿಬೈಲು ಮಾರ್ಗವಾಗಿ 10ಕ್ಕೂ ಅಧಿಕ ಮ್ಯಾನ್‌ ಹೋಲ್‌ ಗ‌ಳಿವೆ. ತಿಂಗಳಿಗೊಮ್ಮೆ ಒಂದಲ್ಲೊಂದು ಮ್ಯಾನ್‌ ಹೋಲ್‌ ಗ‌ಳು ಬ್ಲಾಕ್‌ ಆಗುತ್ತಿದೆ. ಕೊಳಚೆ ನೀರು ರಸ್ತೆಯಲ್ಲಿ ನಿಲ್ಲುತ್ತಿರುವುದರಿಂದ ದ್ವಿಚಕ್ರ ವಾಹನಗಳು ಸ್ಕೀಡ್‌ ಆಗುತ್ತಿದೆ.
– ನವೀನ, ವಾಹನ ಸವಾರ

ಮ್ಯಾನ್‌ ಹೋಲ್‌ ಗ‌ಳು ಸಾರ್ವಜನಿಕರು ಮನೆಯಿಂದ ಘನ ತ್ಯಾಜ್ಯಗಳನ್ನು ಡ್ರೈನೇಜ್‌ಗೆ ಬಿಡುತ್ತಿರುವುದರಿಂದ ಮ್ಯಾನ್‌ ಹೋಲ್‌ ಗ‌ಳು ಬ್ಲಾಕ್‌ ಆಗುತ್ತಿದೆ. ಸಮಸ್ಯೆಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹರಿಸಲು ಪ್ರಯತ್ನಸಲಾಗುತ್ತಿದೆ.
– ಪ್ರಭಾಕರ್‌, ನಗರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next