Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೊಂಡನಹಳ್ಳಿಯ ದೇಶೇಗೌಡ-ಲಕ್ಷ್ಮಮ್ಮ ದಂಪತಿಯ ಎರಡನೇ ಪುತ್ರ ಪಿ.ಡಿ.ಲಿಂಗರಾಜೇಗೌಡ ಹಾಗೂ ಪತ್ನಿ ಲಕ್ಷ್ಮಮ್ಮ ಆರೋಪಿಗಳಾಗಿದ್ದು, ದಂಪತಿ ವಂಚನೆ ವಿರುದ್ದ ಲೋಕಾಯುಕ್ತದ ನಿರ್ದೇಶನದಂತೆ ಸಹಕಾರ ಸಂಘದ ಸಿ.ಇ.ಓ.ರಮೇಶ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಲಿಂಗರಾಜೇಗೌಡನ ತಾಯಿ ಹಾಗೂ ಪತ್ನಿಯ ಹೆಸರು ಲಕ್ಷ್ಮಮ್ಮ ಒಂದೇ ಆಗಿದ್ದು, ಈ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಸಾಲ ಪಡೆದುಕೊಂಡು ವಂಚಿಸಿದ್ದಾನೆ. ಉಯಿಗೊಂಡನಹಳ್ಳಿಯ ದೇಶೇಗೌಡ-ಲಕ್ಷ್ಮಮ್ಮ ದಂಪತಿಗೆ 5 ಗಂಡು, 3 ಹೆಣ್ಣು ಸೇರಿದಂತೆ 8ಮಕ್ಕಳಿದ್ದು, . ತಾಯಿ ಲಕ್ಷ್ಮಮ್ಮ 1986ರಲ್ಲಿ ಮೃತಪಟ್ಟಿದ್ದರು. ತಾಯಿ ಲಕ್ಷ್ಮಮ್ಮರ ಹೆಸರಿನಲ್ಲಿ ಉಯಿಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 38/117ರಲ್ಲಿ 1.05 ಎಕರೆ ಭೂಮಿಯನ್ನು ಹೊಂದಿದ್ದರು. ಪಿ.ಡಿ.ಲಿಂಗರಾಜೇಗೌಡರ ಪತ್ನಿಯ ಹೆಸರೂ ಲಕ್ಷ್ಮಮ್ಮ ಆಗಿದ್ದು, 2006ರಲ್ಲಿ ಲಿಂಗರಾಜೇಗೌಡ ಪಕ್ಕದ ರತ್ನಪುರಿಯ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಪತ್ನಿ ಲಕ್ಷ್ಮಮ್ಮರನ್ನು ತೋರಿಸಿ ತಾಯಿ ಲಕ್ಷ್ಮಮ್ಮನವರ ಹೆಸರಿನಲ್ಲಿ ಸದಸ್ಯತ್ವ ಪಡೆಯಲಾಗಿತ್ತು. ಪತ್ನಿಯಿಂದ ಹೆಬ್ಬೆಟ್ಟು ಸಹಿ ಹಾಕಿಸಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಕುಟುಂಬಕ್ಕೆ ಸೇರಬೇಕಿದ್ದ ಜಮೀನನ್ನು ಅಡಮಾನವಿಟ್ಟು ಸತತ 12ವರ್ಷಗಳ ಕಾಲ ಸಾಲ ಸೌಲಭ್ಯ, ಹಾಗೂ 2007ರಲ್ಲಿ 10ಸಾವಿರ ಹಾಗೂ 2013ರಲ್ಲಿ 21ಸಾವಿರ ಹಾಗೂ 2018ರಲ್ಲಿ 49ಸಾವಿರ ರೂ.ಸಾಲ ಮನ್ನಾದ ಸೌಲಭ್ಯವನ್ನು ಪಡೆದುಕೊಳ್ಳಲಾಗಿದೆ. ಈ ನಡುವೆ ಅಣ್ಣತಮ್ಮಂದಿರು ತಮ್ಮ ಜೀವನೋಪಾಯಕ್ಕಾಗಿ ಬೇರೆ ಊರಿಗೆ ತೆರಳಿದ್ದರೂ, ಊರಿನಲ್ಲಿ ತಮ್ಮ ಮೊಗಣ್ಣೇಗೌಡ ಮಾತ್ರ ಇದ್ದರು.
Related Articles
ಅಣ್ಣನಿಗೆ ಸಾಲಸೌಲಭ್ಯ ಸಿಗುತ್ತಿರುವುದನ್ನು ಕಂಡು ಅನುಮಾನ ಬಂದ ಸಹೋದರ ಮೊಗಣ್ಣೇಗೌಡರು ಸಹಕಾರ ಸಂಘದಲ್ಲಿ ವಿಚಾರಿಸಿದಾಗ ಅಣ್ಣನೇ ಮೋಸ ಮಾಡಿರುವ ಬಗ್ಗೆ ತಿಳಿದು ದೂರು ಸಲ್ಲಿಸುತ್ತಾರೆ.
Advertisement
ಸತ್ಯ ನುಡಿದ ಆಧಾರ್ ಕಾರ್ಡ್ಈ ಸಂಬಂಧ 2020ರಲ್ಲಿ ಮೊಗಣ್ಣೇಗೌಡ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ತಮ್ಮ ಮೃತ ತಾಯಿಯ ಹೆಸರಿನಲ್ಲಿ ಸಹೋದರನೇ ಸಾಲ ಪಡೆದು ವಂಚಿಸಿದ್ದು, ನ್ಯಾಯ ಕಲ್ಪಿಸಬೇಕೆಂದು ದೂರು ಸಲ್ಲಿಸಿದ್ದರು. ನಿಬಂಧಕ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಆಧಾರ್‌ಕಾರ್ಡ್ ಪರಿಶೀಲಿಸಿದಾಗ ಆಧಾರಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿ ಲಕ್ಷ್ಮಮ್ಮ ಕೋಂ ಲಿಂಗರಾಜೇಗೌಡ ಎಂದು ನಮೂದಾಗಿರುವುದು ಬೆಳಕಿಗೆ ಬಂದಿತು. ಸಾಲ ನೀಡುವಾಗ ಸಂಘದ ಸಿಇಓ ದಾಖಲಾತಿಗಳನ್ನು ನಿಖರವಾಗಿ ಪರಿಶೀಲಿಸದೆ ಸಾಲ ಮಂಜೂರು ಮಾಡಿರುವುದು ಕಂಡು ಬಂದಿದೆ. ಸದರಿ ಪ್ರಕರಣದಲ್ಲಿ ಸರಕಾರದ ಸಾಲಮನ್ನಾ,ಬಡ್ಡಿಮನ್ನಾ ಕ್ಲೇಯ್ಮ್ ಗಳನ್ನು ಬಡ್ಡಿಸಮೇತ ವೈಯಕ್ತಿಕವಾಗಿ ವಸೂಲು ಮಾಡಿ ¸ಸರಕಾರಕ್ಕೆ ಮರುಪಾವತಿಸಲು ಸಂಘದ ಅಧ್ಯಕ್ಷರಿಗೆ ತಿಳಿಸಿದೆ. ಇದಲ್ಲದೇ ಸಂಘಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿರುವ ಲಕ್ಷ್ಮಮ್ಮ-ಲಿಂಗರಾಜೇಗೌಡ ದಂಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಿದ್ದರೂ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಹಿಂಜರಿದಾಗ ಲೋಕಾಯುಕ್ತಕ್ಕೆ ಮೊರೆ ಹೋಗಿ ದೂರು ದಾಖಲಿಸಿಕೊಳ್ಳುವಂತೆ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್‌ಗೆ ಸೂಚಿಸಿ, ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರಕಾರದ ಹಣ ವಾಪಸ್ ಪಡೆಯಲಾಗುವುದು
ಸಹಕಾರ ಸಂಘಗಳಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೊರೆಯಬೇಕಿದೆ. ಸದರಿ ಪ್ರಕರಣದಲ್ಲಿ ಸರ್ಕಾರಕ್ಕೆ ಸಲ್ಲಬೇಕಿರುವ ಹಣವನ್ನು ಸಂಪೂರ್ಣವಾಗಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ವೈಯಕ್ತಿಕವಾಗಿ ವಸೂಲು ಮಾಡಿ ಕಟ್ಟಲು ಆದೇಶಿಸಲಾಗಿದೆ. ಸಂಘಕ್ಕೆ ಮೋಸ ಮಾಡಿರುವ ದಂಪತಿಯ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದೆಂದು ಹುಣಸೂರು ಉಪ ಸಹಾಯಕ ನಿಬಂಧಕ ಭರತ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.