ಜೈಪುರ್:ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಗೊಳಿಸುವ ಮುನ್ನವೇ ಪ್ರಯಾಣಿಕರೊಬ್ಬರು ರೈಲ್ವೆ ಟಿಕೆಟ್ ಬುಕ್ ಮಾಡಿ, ಕ್ಯಾನ್ಸಲ್ ಮಾಡಿದ್ದರು. ಆದರೆ ಸೇವಾ ತೆರಿಗೆಯನ್ನು ಸೇರಿಸಿ ಟಿಕೆಟ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ಪ್ರಯಾಣಿಕರೊಬ್ಬರು ಸುಮಾರು ಎರಡು ವರ್ಷಗಳ ಕಾಲ ಆರ್ ಟಿಐ ಮೂಲಕ ಹೋರಾಟ ನಡೆಸಿ ಕೊನೆಗೂ 33 ರೂಪಾಯಿಯನ್ನು ರಿಫಂಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ!
30ರ ಹರೆಯದ ಇಂಜಿನಿಯರ್ ಸುಜೀತ್ ಸ್ವಾಮಿ 2017ರ ಏಪ್ರಿಲ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಿದ್ದರು.(ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವ ಮೊದಲು). ಬಳಿಕ ಟಿಕೆಟ್ ರದ್ದು ಮಾಡಿದ್ದರು. ಟಿಕೆಟ್ ಪ್ರಕಾರ ಸುಜೀತ್ 2017ರ ಜುಲೈ 2ರಂದು ಪ್ರಯಾಣಿಸಬೇಕಿತ್ತು. ಅಂದರೆ ಹೊಸ ತೆರಿಗೆ ನೀತಿ ಜಾರಿಯಾದ ನಂತರ.
ಏತನ್ಮಧ್ಯೆ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಐಆರ್ ಸಿಟಿಸಿ 35ರೂಪಾಯಿಯನ್ನು (ಜಿಎಸ್ ಟಿ) ಹೆಚ್ಚುವರಿಯಾಗಿ ಕಡಿತಗೊಳಿಸಿದ್ದರು. ಸುಜೀತ್ 2017ರ ಏಪ್ರಿಲ್ ನಲ್ಲಿ ಜೈಪುರದ ಕೋಟಾದಿಂದ ದೆಹಲಿಗೆ ಹೋಗಲು ಗೋಲ್ಡನ್ ಟೆಂಪಲ್ ಮೇಲ್ ರೈಲಿನಲ್ಲಿ ಹೋಗಲು (ಜುಲೈ 2ಕ್ಕೆ) ಟಿಕೆಟ್ ಬುಕ್ ಮಾಡಿದ್ದರು. ಅದರ ಬೆಲೆ 765 ರೂಪಾಯಿ. ಬಳಿಕ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಸುಜೀತ್ ಗೆ 665 ರೂಪಾಯಿ ರಿಫಂಡ್ ಆಗಿತ್ತು.
ವೇಯಿಟಿಂಗ್ ಲಿಸ್ಟ್ ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೆ 65 ರೂಪಾಯಿ ಕಡಿತ ಮಾಡುತ್ತಾರೆ. ಆದರೆ ಸುಜೀತ್ ಗೆ 100 ರೂಪಾಯಿ ಕಡಿತ ಮಾಡಿದ್ದರು. ಹೀಗೆ 2017ರಿಂದ ಹೆಚ್ಚುವರಿಯಾಗಿ ಕಡಿತಗೊಳಿಸಿದ್ದ 35 ರೂಪಾಯಿ ಸೇವಾ ತೆರಿಗೆ ಹಣಕ್ಕಾಗಿ ಹೋರಾಟ ನಡೆಸಿದ್ದರು!
ಐಆರ್ ಸಿಟಿಸಿ ದರ ಕಡಿತದ ಗೊಂದಲದ ಬಗ್ಗೆ ಸುಜೀತ್ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಅದರ ಪ್ರಕಾರ ಜಿಎಸ್ ಟಿ ಜಾರಿಯಾಗುವ ಮೊದಲು ಮತ್ತು ನಂತರ ಯಾವ ಕ್ರಮ ಎಂದು ಪ್ರಶ್ನಿಸಿದ್ದರು. ಅದಕ್ಕೆ ಜಿಎಸ್ ಟಿ ಜಾರಿಯಾದ ನಂತರ ಟಿಕೆಟ್ ಬುಕ್ ಮಾಡಿದ್ದರೆ ಸೇವಾ ತೆರಿಗೆ ಹಣ ರಿಫಂಡ್ ಮಾಡುವುದಿಲ್ಲ ಎಂದು ರೈಲ್ವೆ ಇಲಾಖೆ ಉತ್ತರ ಕೊಟ್ಟಿತ್ತು.
ಅದರಂತೆ ತಾನು ಜಿಎಸ್ ಟಿ ಜಾರಿಯಾಗುವ ಮೊದಲೇ(ಜುಲೈ 1, 2017) ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದೆ. ಹೀಗಾಗಿ ತನ್ನ ಟಿಕೆಟ್ ನಲ್ಲಿ ಕಡಿತಗೊಳಿಸಿದ್ದ 35 ರೂ. ಸೇವಾ ತೆರಿಗೆ ಹಣ ವಾಪಸ್ ಕೊಡಬೇಕೆಂದು ಮನವಿ ಮಾಡಿದ್ದರು. ಐಆರ್ ಸಿಟಿಸಿ 35 ರೂಪಾಯಿ ವಾಪಸ್ ಕೊಡಬೇಕು ಎಂದು ಆರ್ ಟಿಐ ನಲ್ಲಿ ಸ್ವಾಮಿಗೆ ಉತ್ತರ ಬಂದಿತ್ತು. ಆ ಪ್ರಕಾರ ಸುಜೀತ್ ಸ್ವಾಮಿ ಬ್ಯಾಂಕ್ ಖಾತೆಗೆ 2019ರ ಮೇ 1ರಂದು 33 ರೂಪಾಯಿ ಹಣ (2 ರೂಪಾಯಿ ಹಣ ಐಆರ್ ಸಿಟಿಸಿ ಕಡಿತಗೊಳಿಸಿತ್ತು) ಜಮೆಯಾಗಿತ್ತು!