ನಾಗ್ಪುರ್:ದೇಶಾದ್ಯಂತ ಆನ್ ಲೈನ್ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಅಪ್ರಾಪ್ತ ಬಾಲಕನ ಬಳಿ ತಂದೆಯ ಮೊಬೈಲ್ ನಲ್ಲಿ ಆ್ಯಪ್ ವೊಂದನ್ನು ಡೌನ್ ಲೋಡ್ ಮಾಡಲು ಹೇಳಿದ್ದು, ಇದರ ಪರಿಣಾಮ ಆ ಬಾಲಕನ ತಂದೆಯ ಖಾತೆಯಿಂದ 9 ಲಕ್ಷ ರೂಪಾಯಿ ಹಣ ಲಪಟಾಯಿಸಿರುವ ಘಟನೆ ನಾಗ್ಪುರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾಡಿ ನಿವಾಸಿ ಅಶೋಕ್ ಮಾನ್ವಾಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ 15 ವರ್ಷದ ಮಗ ಮೊಬೈಲ್ ಫೋನ್ ಬಳಸಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಈ ಕರೆಯನ್ನು ಮಗ ಸ್ವೀಕರಿಸಿದ್ದು, ಆತ ತನ್ನನ್ನು ಡಿಜಿಟಲ್ ಪೇಮೆಂಟ್ ಕಂಪನಿಯ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದ. ಮೊಬೈಲ್ ಫೋನ್ ನಂಬರ್ ಮಾನ್ವಾಟೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು ಎಂದು ದೂರಿನಲ್ಲಿ ವಿವರಿಸಿದೆ.
ತಂದೆಯ ಡಿಜಿಟಲ್ ಪಾವತಿಯ ಕ್ರೆಡಿಟ್ ಮಿತಿಯನ್ನು ಹೆಚ್ಚಳ ಮಾಡುವುದಾಗಿ ಕರೆ ಮಾಡಿದಾಗ ತಿಳಿಸಿದ್ದ. ನಂತರ ರಿಮೋಟ್ ಡೆಸ್ಕ್ ಟಾಪ್ ಸಾಫ್ಟ್ ವೇರ್ ನ ಆ್ಯಪ್ಲಿಕೇಶನ್ ಅನ್ನು ಪೋನ್ ನಲ್ಲಿ ಡೌನ್ ಲೋಡ್ ಮಾಡುವಂತೆ ಮಗನಿಗೆ ಸೂಚಿಸಿದ್ದ.
ಕೂಡಲೇ ಮಗ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಬಿಟ್ಟಿದ್ದ. ಕರೆ ಮಾಡಿದಾತ ಫೋನ್ ಅನ್ನು ರಿಮೋಟ್ ಮೂಲಕ ಆ್ಯಕ್ಸಸ್ ಮಾಡಿಕೊಂಡು ನನ್ನ( ಮಾನ್ವಾಟೆ ಬ್ಯಾಂಕ್) ಖಾತೆಯಿಂದ 8.95 ಲಕ್ಷ ಹಣ ಲಪಟಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಐಪಿಸಿ ಸೆಕ್ಷನ್ 419, 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.