ಮಂಗಳೂರು: ಆಂಧ್ರ ಪ್ರದೇಶದಿಂದ ಮಂಗಳೂರು ಮತ್ತು ಕೇರಳಕ್ಕೆ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದು, ಸುಮಾರು 23.250 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮೊಯಿದ್ದೀನ್ ಶಬೀರ್ (35 ವ) ಎಂದು ಗುರುತಿಸಲಾಗಿದೆ. ಈತ ವಿಶಾಖಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ.
ಇದನ್ನೂ ಓದಿ:World Test Championship final ಪಂದ್ಯಕ್ಕೆ ಅಂತಿಮ ತಂಡ ಪ್ರಕಟಿಸಿದ ಭಾರತ- ಆಸ್ಟ್ರೇಲಿಯಾ
ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಶಬೀರ್ ನನ್ನು ನಗರದ ಮುಡಿಪು ಕಾಯಿರಗೋಳಿ ಎಂಬಲ್ಲಿ ಸಿಸಿಬಿ ಪೊಲೀಸರ ತಂಡ ಸೆರೆ ಹಿಡಿದಿದೆ. ಈತ ಬಳಿಯಿಂದ ಒಟ್ಟು 12,96, 470 ರೂ ಮೌಲ್ಯದ 23.250 ಕೆಜಿ ಗಾಂಜಾ, ಮಹೀಂದ್ರ ಕಾರು ಮತ್ತು ಎರಡು ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಬೀರ್ ವಿರುದ್ಧ ಕಾಸರಗೋಡು, ಮಂಜೇಶ್ವರ, ಕುಂಬ್ಳೆ ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಸೇರಿ 12 ಪ್ರಕರಣಗಳು ದಾಖಲಾಗಿದೆ.