Advertisement
ಕೇರಳೀಯರಿಗೆ ಕಾಸರಗೋಡಿನ ಮಲೆಯಾಳ ಎಂದರೆ ಬಲು ಖುಷಿ. ಕಾಸರಗೋಡಿನ ಮಲೆಯಾಳ ತೃಶ್ಯೂರಿನ ಮಂದಿಗೆ, ತಿರುವನಂತಪುರ ಮಂದಿಗೆ ಅರ್ಥವಾಗುವುದು ಬಲು ಕಷ್ಟ. ಆದರೆ ಅವರಿಗೆ ಕಾಸರಗೋಡಿನ ಭಾಷೆ ಯೆಂದರೆ ಬಲು ಇಷ್ಟ. ಇಲ್ಲಿನ ಮಲೆಯಾಳ ಭಾಷೆಯಲ್ಲಿ ಮಲಾಮೆ, ತುಳು, ಬ್ಯಾರಿ, ಕನ್ನಡ ಪದಗಳು ಮಿಶ್ರಿತಗೊಂಡಿರುವುದು ಮಾತ್ರವಲ್ಲ ಮಾತನಾಡುವ ಶೈಲಿ, ರಾಗ ಮಿಕ್ಕುಳಿದ ಜಿಲ್ಲೆಗಳಿಗಿಂತ ವಿಭಿನ್ನ.
ಪ್ರಾದೇಶಿಕ ಮಲೆಯಾಳಂ ಭಾಷೆಯ ಪಾತ್ರಗಳಲ್ಲಿ ಈ ಮೊದಲು ಅಭಿನಯಿಸಿದ ಮೆಗಾ ಸ್ಟಾರ್ ಮಮ್ಮುಟ್ಟಿ ಈ ಚಿತ್ರದಲ್ಲಿ ಕಾಸರಗೋಡಿನ ಭಾಷೆಯಲ್ಲಿ ಮಾತನಾಡಲಿ ದ್ದಾರೆ. ಮಧ್ಯವಯಸ್ಕ ವ್ಯಾಪಾರಿಯಾದ ಕುಂಬಳೆಯ ನಿತ್ಯಾನಂದ ಶೆಣೈಯಾಗಿ ಮಮ್ಮುಟ್ಟಿ ಅಭಿನಯಿಸಿದ್ದು, ರೆಂಜಿ ಪಣಿಕ್ಕರ್, ನಿರಂಜನ, ಮಮ್ಮುಕೋಯ, ಸಿದ್ದಿಕ್, ಸಾಯಿಕುಮಾರ್. ಶೀಲಾ ಅಬ್ರಾಹಂ. ಅಬೂ ಸಲೀಂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಕೇರಳದಲ್ಲಿ ಮಾತ್ರವಲ್ಲ ಕೊಲ್ಲಿ ರಾಷ್ಟ್ರಗಳಲ್ಲೂ ಭಾರೀ ಪ್ರಚಾರವನ್ನು ಗಿಟ್ಟಿಸಿದೆ. ಈಗಾಗಲೇ ಯೂಟ್ಯೂಬ್ ನಲ್ಲಿ ಇದರ ಟ್ರೈಲರನ್ನು ಕೇವಲ ಏಳು ತಾಸಿನಲ್ಲಿ ಒಂದು ಮಿಲಿಯನ್ ಜನ ವೀಕ್ಷಿಸಿದ್ದು, ಈಗಾಗಲೇ ಮೂರು ಮಿಲಿಯನ್ ಗಡಿ ದಾಟಿದೆ. ಮಾಧ್ಯಮಗಳಲ್ಲಿ ಈ ಚಿತ್ರ ಭಾರೀ ಚರ್ಚಾವಸ್ತುವಾಗಿದೆ. ಕಾಸರಗೋಡು, ಕೊಚ್ಚಿ, ಗೋವಾಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಮೊದಲೇ ಬಿಡುಗಡೆಯಾಗಬೇಕಾಗಿದ್ದರೂ, ಮಮ್ಮುಟ್ಟಿ ಅಭಿನಯದ ಗ್ರೇಟ್ ಫಾದರ್ ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ದಾಖಲೆಗಳನ್ನು ಸೃಷ್ಟಿಸಿ ನಾಗಾಲೋಟಗೈಯ್ಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಪುತ್ತನ್ ಪಣಂ ಬಿಡುಗಡೆ ವಿಳಂಬವಾಗಿದೆ. ಹೀಗಿದ್ದರೂ ವಿಷು ಹಬ್ಬಕ್ಕೆ ಮುಂಚಿತವಾಗಿ ಎಪ್ರಿಲ್ 12ರಂದು ಬುಧವಾರ ಈ ಚಿತ್ರ ತೆರೆಕಾಣಲಿದೆ. ಚಿತ್ರದಲ್ಲಿ ಮಮ್ಮುಟ್ಟಿ ಕೇಂದ್ರ ಬಿಂದುವಾಗಿದ್ದು, ವ್ಯಾಪಾರಿ “ಕುಂಬಳೆ ನಿತ್ಯಾನಂದ ಶೆಣೈ’ ಯ ಪಾತ್ರವನ್ನು ನೋಡಲು ಇಡೀ ಕೇರಳದ ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಕುಂಬಳೆ ಮಂದಿ ಕೂಡಾ ಈ ಚಿತ್ರವನ್ನು ಕಾಣಲು ಕಾತರದಲ್ಲಿದ್ದು, ಇಂದು ಚಿತ್ರ ತೆರಕಾಣಲಿದೆ.
Related Articles
ಅಪನಗದೀಕರಣದ ಕಥೆ
ಹೆಸರೇ ಸೂಚಿಸುವಂತೆ ಅಪನಗದೀಕರಣ ಕ್ಕೆ ಸಂಬಂಧಿಸಿದ ಚಿತ್ರವಿದು. 1,000 ಹಾಗೂ 500 ರೂ. ನೋಟುಗಳನ್ನು ಏಕಾಏಕಿ ರದ್ದುಗೊಳಿಸಿದಾಗ ಸಮಾಜದಲ್ಲಿ ಉಂಟಾದ ತಳಮಳ, ಕಿರುಕುಳವನ್ನೊಳಗೊಂಡ ಸ್ವಾರಸ್ಯಕರ ಚಿತ್ರಣ ಈ ಚಿತ್ರದ ಮೂಲಕಥೆಯಾಗಿದೆ. ಹೆಸರಿಗೆ ಸಬ್‌ಟೈಟಲ್ ಕೂಡಾ “ದಿ ನ್ಯೂ ಇಂಡಿಯನ್ ರೂಪಾಯಿ’ ಎಂದಿರಿಸಲಾಗಿದೆ.
Advertisement
ಕಪ್ಪುಹಣ ಕುರಿತ ಚಿತ್ರಕಥೆಯಾದ ಪುತ್ತನ್ ಪಣಂ ರಂಜಿತ್ ನಿರ್ದೇಶನದಲ್ಲಿ ಸೊಗಸಾಗಿ ಮೂಡಿ ಬಂದಿದೆ. ರಾವಣ ಪ್ರಭು, ನರಸಿಂಹಂ, ಸ್ಪಿರಿಟ್, ಇಂಡಿಯನ್ ರೂಪೀ, ತಿರಕಥ, ಆರಾಂ ತಂಬುರಾನ್ ಮುಂತಾದ ಯಶಸ್ವಿ ಚಿತ್ರಗಳನ್ನು ಮಲೆಯಾಳಿಗರಿಗೆ ನೀಡಿ ರಾಷ್ಟ್ರ ಪ್ರಶಸ್ತಿಗಳನ್ನು ಗಿಟ್ಟಿಸಿದ ರಂಜಿತ್‌ರವರ ಪುತ್ತನ್ ಪಣಂ ಕೂಡಾ ಬಹಳ ನಿರೀಕ್ಷೆಯ ಚಿತ್ರವಾಗಿದೆ. ರಂಜಿತ್ ನಿರ್ದೇಶನದ ತಿರಕಥ (2008),ಇಂಡಿಯನ್ ರೂಪೀ (2011) ಹಾಗೂ ಸ್ಪಿರಿಟ್ (2012) ಗೆ ರಾಷ್ಟ್ರಪ್ರಶಸ್ತಿಯೂ ದೊರೆತಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾನ್ ರೆಹಮಾನ್‌ರ ಆಕರ್ಷಕ ಸಂಗೀತವಿರುವ ಈ ಚಿತ್ರದಲ್ಲಿ ನಿರಂಜನಾ ಅನೂಪ್ ಪ್ಲಸ್-ಟು ವಿದ್ಯಾರ್ಥಿ ನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
– ಹರ್ಷಾದ್ ವರ್ಕಾಡಿ