Advertisement

ಸವದತ್ತಿ ಮಹಿಳಾ ಪೇದೆ ಈಗ ಪಿಎಸ್‍ಐ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

06:21 PM Jan 24, 2022 | Team Udayavani |

ಸವದತ್ತಿ : ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುಧೀರ್ಘ 10 ವರ್ಷ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೊಲೀಸ್ ಪೇದೆ ಮಮತಾ ಗೈಬಿನಾಥ ಜೋಗೀಸ್ ಪಿಎಸ್‍ಐ ಪರೀಕ್ಷೆಯಲ್ಲಿ ಸೇವಾ ನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

ಮೂಲತಃ ರಾಮದುರ್ಗದವರಾದ ಇವರು, ಬಡ ಕುಟುಂಬದಲ್ಲಿ ಜನಿಸಿದ ಇವರು ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಗೌಬಿನಾಥ ನಿಧನರಾದರು. ಇವರ ಸೋದರ ಮಾವ ವೀರಭದ್ರ ಸಹಾಯದೊಂದಿಗೆ ತಾಯಿ ಮಾಸವ್ವ ರಾಮದುರ್ಗದಲ್ಲಿ ಕೂಲಿ-ನಾಲಿ ಮಾಡಿ ಮಗಳಿಗೆ ಉತ್ತಮ ಶಿಕ್ಷಣ ನೀಡಿದರು. ರಾಮದುರ್ಗದ ಶಾಸಕರ ವಿದ್ಯಾಚೇತನ ಮಾದರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನೇತಾಜಿ ಸುಭಾಸ ಚಂದ್ರ ಭೋಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ.

ಮೊದಲಿನಿಂದಲೂ ಬಡತನವನ್ನು ಕಣ್ಣಾರೆ ಕಂಡ ಇವರು ಏನನ್ನಾದರೂ ಸಾಧಿಸಬೇಕೆಂಬ ಹಂಬಲ, ತಾಯಿಯನ್ನು ಸುಖವಾಗಿಟ್ಟುಕೊಳ್ಳಬೇಕೆಂಬ ಆಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಆರಂಭದಲ್ಲಿ ಯಶ ಕಂಡ ಇವರು 2010ರ ಸಿವಿಲ್ ಕಾನ್ಸ್ ಟೇಬಲ್ ಹುದ್ದೆ ಗಿಟ್ಟಿಸಿಕೊಂಡರು. ನಂತರ 2013ರಲ್ಲಿ ದೂರ ಶಿಕ್ಷಣದ ಮೂಲಕ ಬಿ.ಎ ಪದವಿ ಮುಗಿಸಿ ಪಿಎಸೈ ಹುದ್ದೆಗೆ ತಯಾರಿ ನಡೆಸಿದರು.

ಸತತ ಪ್ರಯತ್ನ, ಕಠಿಣ ಪರಿಶ್ರಮ ಹಾಗೂ ಧೃಡ ನಂಬಿಕೆಯಿದ್ದರೆ ಯಾವುದು ಅಸಾಧ್ಯವಲ್ಲ ಎಂಬುವದನ್ನು ಮಮತಾ ಜೋಗೀಸ್ 2021ರ ಪಿಎಸೈ ಹುದ್ದೆಗೆ ಆಯ್ಕೆಯಾಗುವದರ ಮೂಲಕ ತೋರಿಸಿಕೊಟ್ಟಿದ್ದಾರೆ. ಮಹಿಳಾ ಮೀಸಲು ಕೋಟಾದಡಿ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿ ರಾಜ್ಯಕ್ಕೆ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಮಾಹಿತಿ ಬಿಟ್ಟುಕೊಡಲ್ಲ:ಡಿಕೆಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next