ಮಾಲೂರು: ಸರ್ಕಾರದ ನಿಯಮದಂತೆ ಖಜಾನೆ -2 ಖಾತೆ ಆರಂಭವಾಗುವಲ್ಲಿ ವಿಳಂಬವಾಗುತ್ತಿರುವ ಕಾರಣ ತಾಲೂಕು ಪಂಚಾಯ್ತಿ ಆರ್ಥಿಕ ವಹಿವಾಟು ಸ್ಥಗಿತವಾಗಿದೆ ಎಂದು ತಾಪಂ ಅಧ್ಯಕ್ಷೆ ತ್ರಿವರ್ಣ ರವಿ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಮಾರ್ಚ್‌ನಿಂದ ಸರ್ಕಾರದ ನಿಯಮದಂತೆ ಅರ್ಹರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಖಜಾನೆ-2ರ ಹೊಸ ಖಾತೆ ಆರಂಭಿಸಬೇಕಾಗಿದೆ. ಖಾತೆ ಆರಂಭದಲ್ಲಿ ವಿಳಂಬವಾಗುತ್ತಿರುವ ಕಾರಣ, ಯಾವುದೇ ಆರ್ಥಿಕ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.ತಾಪಂ ಇಒ ಕೃಷ್ಣಪ್ಪ ಮಾತನಾಡಿ, ಖಜಾನೆ -2ರ ಹೊಸ ಖಾತೆ ಆರಂಭವಾಗದೆ ತಾಪಂ ಸಿಬ್ಬಂದಿಗೂ 3-4 ತಿಂಗಳಿಂದ ವೇತನ ನೀಡಲಾಗುತ್ತಿಲ್ಲ ಎಂದರು.
ಬದಲಾವಣೆ ಸಾಧ್ಯತೆ: ಚಿಕ್ಕತಿರುಪತಿ ಕ್ಷೇತ್ರದ ಸದಸ್ಯ ಮುನಿರಾಜು ಮಾತನಾಡಿ, ತಾಪಂ ಆಡಳಿತ ಅಧಿಕಾರಕ್ಕೆ ಬಂದು ಸರಿಸುಮಾರು ಮೂರೂವರೇ ವರ್ಷವಾಗಿದೆ. ಇದುವರೆಗೂ ತಾಪಂ ಆರ್ಥಿಕ ವಹಿವಾಟುಗಳ ಬಗ್ಗೆ ಸಭೆಯಲ್ಲಿ ಲೆಕ್ಕಪತ್ರ ಮಂಡನೆಯಾಗಿಲ್ಲ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಠರಾವು ಪುಸ್ತಕದಲ್ಲಿ ಬರೆಯುವಂತೆ ಸೂಚಿಸಿದರು. ಆದರೆ, ಸಭೆ ನಡಾವಳಿ ಕಚ್ಚಾಪುಸ್ತಕದಲ್ಲಿ ಬರೆದು ನಂತರ ಠರಾವು ಪುಸ್ತಕದಲ್ಲಿ ಬರೆಯುವುದಾಗಿ ತಿಳಿಸಿದ ತಾಪಂ ಇಒ ಮಾತಿಗೆ ಒಪ್ಪದ ಸದಸ್ಯರು, ಸಭೆಯಲ್ಲಿನ ತೀರ್ಮಾನ ಪುಸ್ತಕದಲ್ಲಿ ಬರೆಯುವ ವೇಳೆಗೆ ಬದಲಾವಣೆ ಸಾಧ್ಯತೆಗಳಿವೆ ಎಂದು ಹುಂಗೇನಹಳ್ಳಿ ಕ್ಷೇತ್ರದ ಸದಸ್ಯ ಶ್ರೀನಾಥ ತಿಳಿಸಿದರು.
33 ಲಕ್ಷ ರೂ.ಬಿಡುಗಡೆ: ಹೆಚ್ಚು ಆರ್ಥಿಕ ವಹಿವಾಟು ಹೊಂದಿರುವ ಇಲಾಖೆಗಳ ಚರ್ಚೆ ನಡೆಸುವಂತೆ ತಿಳಿಸುವ ಸದಸ್ಯರ ಮಾತಿನಿಂದಾಗಿ ಸಮಾಜಕಲ್ಯಾಣ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾತ ನಾಡಿದ ಸಹಾಯಕ ನಿರ್ದೇಶಕ ಶಿವಕುಮಾರ್, ತಾಲೂಕಿನಲ್ಲಿ ನಡೆಯುತ್ತಿರುವ 12 ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಒಂದು ಕೋಟಿ ರೂ.ಗಳ ಪ್ರಸ್ತಾವನೆ ಇದ್ದು ಅ ಪೈಕಿ ಮೊದಲ ಹಂತದಲ್ಲಿ 33 ಲಕ್ಷರೂ. ಬಿಡುಗಡೆಯಾಗಿದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ತಾಪಂ ಸದಸ್ಯ ಮುನಿರಾಜು, ತಾಲೂಕಿನ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಬಾಗೂರು ಗ್ರಾಮದಲ್ಲಿ ಜಿಪಂ ಉಪವಿಭಾಗದ ಎಂಜಿನಿಯರ್ ವಿಶ್ವನಾಥ್ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಜಗಳ ಆರಂಭಿಸಿದ್ದಾರೆ. ಈ ಬಗ್ಗೆ ಜಿಪಂ ಸಿಇಒ ಅವರಿಗೆ ಅಧಿಕಾರಿ ಜಾತಿ ನಿಂದನೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಆದರೆ ಅಧಿಕಾರಿಗೆ ಸದಸ್ಯರ ಜಾತಿ ಬಗ್ಗೆ ತಿಳಿದೇ ಇಲ್ಲ ಎಂದರು. ಈ ಬಗ್ಗೆ ತಾಪಂ ಸಾಮಾನ್ಯಸಭೆಯಲ್ಲಿ ಅನುಮೋದನೆ ಮಾಡಿ ಜಿಪಂ ಸಿಇಒ ಅವರಿಗೆ ಮನವರಿಕೆ ಮಾಡುವಂತೆ ಸೂಚಿಸಿದರು.
ರೋಟಾ ವೈರಸ್ ಲಸಿಕೆ: ಆರೋಗ್ಯ ಇಲಾಖೆ ಚರ್ಚೆ ವೇಳೆ ಮಾತನಾಡಿದ ತಾಲೂಕು ಅರೋಗ್ಯಾಧಿಕಾರಿ ಡಾ.ಪ್ರಸನ್ನಕುಮಾರ್, ತಾಲೂಕಿನಲ್ಲಿ ಎಲ್ಲಾ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದ್ದು 8 ಡೆಂಘೀ ಪ್ರಕರಣ ದಾಖಲಾಗಿವೆ. ಹೊಸದಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅತಿಸಾರ ಬೇಧಿ ನಿಯಂತ್ರಿಸಲು ಹೊಸದಾಗಿ ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮ ಅರಂಭವಾಗಿದೆ. ಹುಟ್ಟಿನ ಮಗುವಿನಂದ ಆರಂಭವಾಗಿ ಒಂದೂವರೇ ವರ್ಷದ ಎಲ್ಲಾ ಮಕ್ಕಳಿಗೆ ರೋಟಾ ವೈರಸ್ ತಡೆ ಲಸಿಕೆ ಕೊಡಿಸುವಂತೆ ಸೂಚಿಸಿದರು. ಇದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅತಿಸಾರ ಬೇಧಿ ತಡೆದು ಶೇ.50 ರಷ್ಟು ಮಕ್ಕಳ ಸಾವುಗಳನ್ನು ತಡೆಯಬಹುದಾಗಿದೆ ಎಂದರು. ತಾಪಂ ಉಪಾಧ್ಯಕ್ಷೆ ನಾಗವೇಣಿಚಂದ್ರು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗೇಶ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.