Advertisement

ಮಳೆ ಇಲ್ಲದೆ, ಮುಂಗಾರು ಬಿತ್ತನೆಗೆ ಹಿನ್ನಡೆ

03:38 PM Aug 15, 2019 | Naveen |

ಮಾಲೂರು: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದರೆ, ತಾಲೂಕಿನಲ್ಲಿ ಮಳೆ ಕೊರತೆ ಮುಂದುವರಿದಿದೆ. ಸಕಾಲದಲ್ಲಿ ಮಳೆ ಬೀಳದ ಕಾರಣ ಆಶ್ರಿತ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಇದರಿಂದ ಈ ಬಾರಿಯಾದ್ರೂ ಮನೆಗೆ, ಜಾನುವಾರುಗಳಿಗೆ ಆಹಾರ ಧಾನ್ಯ, ಮೇವು ಬೆಳೆದುಕೊಳ್ಳಬೇಕೆಂಬ ರೈತರ ಕನಸು ಕಮರಿಹೋಗಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ಮಳೆ ಆಶ್ರಿತ ಬೆಳೆಗಳ ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ತಾಲೂಕಿನಲ್ಲಿ ಪ್ರತಿವರ್ಷ 400 ಹೆಕ್ಟರ್‌ನಲ್ಲಿ ರೈತರು ನೆಲಗಡಲೆ ಬಿತ್ತನೆ ಮಾಡುತ್ತಿದ್ದರು. ಆದರೆ, ಮಳೆ ಅಭಾವದಿಂದ ಕೇವಲ 204 ಹೆಕ್ಟೇರ್‌ನಲ್ಲಿ ಮಾಡಿದ್ದಾರೆ. ತೊಗರಿ 77 ಹೆಕ್ಟೇರ್‌ನಲ್ಲಿ 550 ಕ್ವಿಂಟಲ್ ಬಿತ್ತನೆಯಾಗಿದೆ. ಆದರೆ, ಮಳೆ ಕಣ್ಣಾಮುಚ್ಚಾಲೆಯಿಂದ ಬಿತ್ತನೆ ಮಾಡಿದ್ದ ಬೀಜ ಕೂಡ ಸರಿಯಾಗಿ ಮೊಳಕೆಯೊಡೆಯದೇ, ಗಿಡಗಳು ಒಣಗಲಾರಂಭಿಸಿವೆ. ಸಕಾಲದಲ್ಲಿ ಮಳೆಯಾಗದೇ ಎಳ್ಳು, ರಾಗಿ ಬಿತ್ತನೆಯನ್ನು ಕೆಲ ರೈತರು ಮಾಡಿಲ್ಲ. ಇದರಿಂದ ಈ ವರ್ಷದ ಊಟಕ್ಕೆ ಏನು ಮಾಡಬೇಕೆಂಬ ಚಿಂತೆ ಕಾಡುತ್ತಿದೆ.

ಈಗಲೂ ಬಿತ್ತನೆಗೆ ರೈತರು ರೆಡಿ: ಮುಂಗಾರು ಪೂರ್ವದಲ್ಲಿ ಬಿದ್ದ ಮಳೆಗೆ ರೈತರು ಉತ್ಸಾಹದಿಂದಲೇ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದರು. ಆದರೆ, ಜೂನ್‌, ಜುಲೈ, ಆಗಸ್ಟ್‌ ಅರ್ಧ ತಿಂಗಳು ಕಳೆದರೂ ಮಳೆ ಬರುವ ಲಕ್ಷಣ ಕಂಡು ಬರುತ್ತಿಲ್ಲ.

ಜೂನ್‌ ಅಂತ್ಯಕ್ಕೆ 69.9 ಮಿಮೀ ಮಳೆಯಾಗ ಬೇಕಾಗಿತ್ತು. ಆದರೆ, ಆ ಮಟ್ಟಿನ ಮಳೆ ಬರಲಿಲ್ಲ. ರೈತರು ಮುಂಗಾರು ಬಿತ್ತನೆ ಕಾರ್ಯ ನಡೆಸಲು ಈಗಲೂ ಕಾಯುತ್ತಿದ್ದಾರೆ.

ಮೇವಿನ ಬವಣೆ ಹೆಚ್ಚಿದೆ: ಅಲ್ಪಾವಧಿಯ ರಾಗಿ ತಳಿ ಬಿತ್ತಲು ಆಗಸ್ಟ್‌ ಅಂತ್ಯದವರೆಗೂ ಅವಕಾಶವಿದೆ. ಆದರೆ, ಮಳೆ ಕೊರತೆ ರೈತರಲ್ಲಿನ ಉತ್ಸಾಹ ಕಡಿಮೆ ಮಾಡಿದೆ. ಈ ಬಾರಿ ಮಳೆ ಆಶ್ರಿತ ಅವರೆ, ಜೋಳ, ನೆಲಗಡಲೆ, ತೊಗರಿ ಮತ್ತಿತರ ಬೆಳೆಗಳು ರೈತರ ಕೈತಪ್ಪುವ ಭೀತಿ ಇದೆ. ರಾಸುಗಳ ಮೇವಿನ ಬವಣೆಯೂ ಹೆಚ್ಚುವ ಆತಂಕ ರೈತರಲ್ಲಿ ಮನೆ ಮಾಡಿದೆ.

Advertisement

ಬರ ಪರಿಹಾರ ಹಣವೂ ಬರಲಿಲ್ಲ: ಕಳೆದ ವರ್ಷ ಮಳೆ ಕೊರತೆಯಿಂದ ರಾಗಿ ಬೆಳೆ ಸಮರ್ಪಕವಾಗಿ ಬೆಳೆದಿರಲಿಲ್ಲ. ಹೀಗಾಗಿ ಇತ್ತ ಸರ್ಕಾರದಿಂದ ಬರ ಪರಿಹಾರ ಹಣವಾದ್ರೂ ಬರುತ್ತದೆ ಎಂಬ ನಿರೀಕ್ಷೆ ರೈತರಿಗೆ ಇತ್ತು. ಆದರೆ, ಪ್ರಸ್ತುತ ವರ್ಷದಲ್ಲಿ ಎದುರಾದ ಚುನಾವಣೆಗಳ ಕಾರಣದಿಂದ ಆ ಹಣವೂ ಸಮರ್ಪಕವಾಗಿ ರೈತರ ಕೈಸೇರಲೇ ಇಲ್ಲ. ಈ ಬಾರಿಯಾದ್ರೂ ವರ್ಷಕ್ಕೆ ಬೇಕಾದಷ್ಟು ಆಹಾರ ಧಾನ್ಯ ಬೆಳೆದುಕೊಳ್ಳಬೇಕೆಂಬ ಆಸೆಯೂ ಕಮರಿ ಹೋಗಿದೆ.

ಬೆಳೆಗಳ ದಾಸ್ತಾನು: ಈಗಾಗಲೇ ತಾಲೂಕಿನ ಕಸಬಾ, ಟೇಕಲ್, ಮಾಸ್ತಿ, ಲಕ್ಕೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ 100 ಕ್ವಿಂಟಲ್ ನೆಲಗಡಲೆ, 15 ಕ್ವಿಂಟಲ್ ತೊಗರಿ, 5 ಕ್ವಿಂಟಲ್ ಅಲಸಂದಿ, 202 ಕ್ವಿಂಟಲ್ ವಿವಿಧ ತಳಿಯ ರಾಗಿ ಬಿತ್ತನೆ, ಪೋಷಕಾಂಶ ಗೊಬ್ಬರಗಳಾದ ಬೋರಾನ್‌, ಎರೆಹುಳು, ಜಿಪ್ಸಂ, ಜೀಂಕ್‌ ಅನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದೆ.

ಕಳೆದ 15 ದಿನಗಳಿಂದ ಉತ್ತರ ಕರ್ನಾಟಕ ಸೇರಿ ದೇಶದ ಹಲವು ಕಡೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿಯೂ ಮಳೆ ವಾತಾವರಣ ಸೃಷ್ಟಿಯಾಗಿದ್ದರೂ ಮಳೆ ಮಾತ್ರ ಬೀಳುತ್ತಿಲ್ಲ. ಕೆಲವೊಮ್ಮೆ ತುಂತುರು ಮಳೆ ಸುರಿಯುತ್ತದೆ. ಅದನ್ನೇ ನಂಬಿಕೊಂಡಿರುವ ಕೆಲವು ರೈತರು ದೇವರ ಮೇಲೆ ಭಾರ ಹಾಕಿ ಒಣ ಭೂಮಿಯಲ್ಲಿಯೇ ರಾಗಿ ಬಿತ್ತನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next