ಮಲ್ಪೆ: ವಿದೇಶದಲ್ಲಿ ದುಡಿಯುವ ಅನಿವಾಸಿ ಭಾರತೀಯ ಕುಟುಂಬದ ಸುರಕ್ಷತೆಗಾಗಿ ಪ್ರತ್ಯೇಕ ನೀತಿ ಮತ್ತು ಸಚಿವಾಲಯ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಹೇಳಿದರು.
ಅವರು ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ರವಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಈ ಘಟನೆಯಿಂದ ನೂರ್ ಮುಹಮ್ಮದ್ ಅವರಂತೆ ವಿದೇಶದಲ್ಲಿ ದುಡಿಯುವ ಅನಿವಾಸಿ ಕನ್ನಡಿಗರು ಬಹಳಷ್ಟು ಆತಂಕಕ್ಕೀಡಾಗಿದ್ದಾರೆ. ಪ್ರಕರಣದ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ವಿಶೇಷ ಸರಕಾರಿ ಅಭಿಯೋಜಕರ ನೇಮಕ ಕುರಿತು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು.
ಈ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ| ಆರತಿ ಕೃಷ್ಣ ಅವರಿಗೆ ನೂರ್ ಮುಹಮ್ಮದ್ ಮನವಿಯನ್ನು ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಎಂ. ಎ. ಗಫೂರ್, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ನೂರು ಮುಹಮ್ಮದ್ ಕುಟುಂಬದ ಅಶ್ರಫ್ ಕೆ. ಮೊದಲಾದವರು ಉಪಸ್ಥಿತರಿದ್ದರು.