Advertisement

ವಾರದಿಂದ ಮಲ್ಪೆ-ಪಡುಕೆರೆ ಗ್ರಾಮಸ್ಥರಿಗೆ ಕತ್ತಲೆ ಭಾಗ್ಯ

06:00 AM Jun 03, 2018 | Team Udayavani |

ಮಲ್ಪೆ:  ಒಂದೆಡೆ ಸೆಕೆ, ಇನ್ನೊಂದೆಡೆ ಸೊಳ್ಳೆಗಳ ಕಾಟ, ಫ್ಯಾನ್‌ ಇಲ್ಲದೆ ಮಲಗಲು ಸಾಧ್ಯವಿಲ್ಲ, ಹೊರಗೆ ಮಲಗಲು ಭಯ! 

Advertisement

ಕುಡಿಯಲು, ಸ್ನಾನ ಮಾಡಲು ನೀರಿಲ್ಲ. ಈ ಕಾರಣ ಸಂಬಂಧಿಕರ ಮನೆಗೆ ಬಂದು ಕುಳಿತಿದ್ದೇವೆ. ಮನೆಯಲ್ಲಿ ಅಡುಗೆ ಮಾಡುವುದೇ ಕಷ್ಟವಾಗಿದೆ. ಇದು ಕುದ್ರುಕರೆ ಭಾಗದ ಉದ್ಯಾವರ ಕನಕೋಡದಿಂದ ಮಲ್ಪೆ ಶಾಂತಿನಗರದ ವರೆಗಿನ ಪ್ರದೇಶದ ಒಂದೊಂದು ಮನೆ ಮಂದಿಯ ಅಳಲು ಪಡುಕರೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಡೆಕಾರ್‌ ಸೀವೀವ್‌ ರೆಸಾರ್ಟ್‌ ಸಮೀಪದ ಹೊಳೆ ತೀರದಲ್ಲಿರುವ ವಿದ್ಯುತ್‌ ಟವರ್‌ ಹೊಳೆಗೆ ಉರುಳಿಬಿದ್ದು  ವಿದ್ಯುತ್‌ ಸಂಪರ್ಕ ಕಡಿದುಕೊಂಡ ಹಿನ್ನೆಲೆಯಲ್ಲಿ  ವಾರದಿಂದ ಕರೆಂಟಿಲ್ಲ. ಇದರಿಂದ ಇಲ್ಲಿನ ಜನ ಅಕ್ಷರಶಃ ಪರದಾಡುವಂತಾಗಿದೆ. ಇಷ್ಟೊಂದು ದೀರ್ಘ‌ ಅವಧಿಗೆ ಕರೆಂಟ್‌ ಇಲ್ಲದ್ದು ಇದೇ ಮೊದಲು ಎನ್ನುತ್ತಾರೆ ಇಲ್ಲಿನ ಜನ.  ಉದ್ಯಾವರ ಕನಕೋಡದಿಂದ ಮಲ್ಪೆ ಶಾಂತಿನಗರದ ನಾಗರಿಕರಿಗೆ ಸುಮಾರು 650 ಮನೆಗಳಿಗೆ ವಿದ್ಯುತ್‌ ಪೂರೈಕೆ ಇಲ್ಲದೆ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಶಾಲೆಗಳು ಆರಂಭಗೊಂಡಿದ್ದು ವಿದ್ಯಾರ್ಜನೆಗೂ ತೊಡಕಾಗಿದೆ.  

ಮಹಿಳೆಯರ ಸಮಸ್ಯೆ ಹೇಳತೀರದು 
ಮನೆಯಲ್ಲಿ ಗೃಹಣಿಯರಂತೂ ನಿತ್ಯ ಮೆಸ್ಕಂನವರಿಗೆ ಹಿಡಿ ಶಾಪ ಹಾಕುವುದು ಸಾಮಾನ್ಯವಾಗಿದೆ. ಹಗಲು ರಾತ್ರಿ ಕಿರಿ ಕಿರಿಯ ಅನುಭವಿಸುವ ಮನೆ ಮಂದಿಗೆ ಸರಿಯಾಗಿ ಎರಡು ಹೊತ್ತು ಊಟ ಮಾಡಲಾಗುತ್ತಿಲ್ಲ. ರುಬ್ಬುವ ಕಲ್ಲು ಮೂಲೆ ಸೇರಿದೆ. ಕರೆಂಟ್‌ ಇಲ್ಲದ್ದರಿಂದ ಮಿಕ್ಸಿ, ಗೆùಂಡರ್‌ ನಾಮ್‌ಕೆವಾಸ್ತೆ ಎಂಬಂತಾಗಿದೆ. ಮುಖ್ಯವಾಗಿ ಧಾರಾವಾಹಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯೂ ಮಹಿಳೆಯರನ್ನು ಕಾಡುತ್ತಿದೆ. ನಿರಂತರ ವಿದ್ಯುತ್‌ ಕಡಿತದಿಂದಾಗಿ ನೀರಿನ ಸರಬರಾಜುನಲ್ಲೂ  ವ್ಯತ್ಯಯ ಉಂಟಾಗಿದೆ. ಕೆಲವಡೆ ಟ್ಯಾಂಕರ್‌ ಮೂಲಕ ನೀರಿನ ಸರಾಬರಾಜು ಮಾಡಲಾಗುತ್ತಿದೆ. 

ಮೊಬೈಲ್‌ ಸ್ವಿಚ್‌ಆಫ್‌
ಈ ಭಾಗದ ಬಹುತೇಕ ಮಂದಿಯ ಮೊಬೈಲ್‌ನಲ್ಲಿ  ಬ್ಯಾಟರಿ  ಚಾರ್ಜ್‌ ಇಲ್ಲದೆ  ಸ್ವಿಚ್‌ಆಫ್‌ ಆಗಿ  ಸಂಪರ್ಕವೇ ಕಡಿದುಕೊಂಡಂತಾಗಿದೆ. ಕೆಲ ಮಂದಿ ಪೇಟೆ ಕಡೆಗೆ ಹೋಗಿ ಚಾರ್ಜ್‌ ಮಾಡಿಸಿಕೊಳ್ಳುತ್ತಿದ್ದಾರೆ. 

ಸರ್ವರ್‌ ಸಮಸ್ಯೆ
ಬಿ.ಎಸ್‌.ಎನ್‌.ಎಲ್‌. ಅಂತರ್ಜಾಲ ಸಂಪರ್ಕವೂ ಕೂಡ ಕೈಕೊಟ್ಟು ತೊಂದರೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ಬಿಎಸ್‌ಎನ್‌ಎಲ್‌ ಸಂಪರ್ಕ ಇರುವುದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಬ್ಯಾಂಕ್‌ಗಳಲ್ಲಿ ಸರ್ವರ್‌ ಸಮಸ್ಯೆ ಎಂದು ಗ್ರಾಹಕರು ವಾಪಾಸು ಹೋಗುತ್ತಿದ್ದರು. ಕೆಲವು ದಿನಗಳಿಂದ ಸಮಸ್ಯೆ ಇದ್ದರೂ ಬಿಎಸ್‌ಎನ್‌ಎಲ್‌ ತಲೆಕೆಡಿಸಿಕೊಂಡಿಲ್ಲ ಎಂದು ಜನರು ದೂರಿದ್ದಾರೆ. 

Advertisement

ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ
ಕಡೆಕಾರು ಸೀವೀವ್ಯೂ ರೆಸಾರ್ಟ್‌ ಬಳಿ ಬಿದ್ದ ಟವರ್‌ ಸಮೀಪದ 11 ಮೀಟರ್‌ ಎತ್ತರದ ಪೋಲ್‌ ಹಾಕಿ ಹೊಳೆಯ ಮೇಲೆಯೇ  ತಾತ್ಕಾRಲಿಕವಾಗಿ ಸಂಪರ್ಕವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸುಮಾರು 22 ಸಿಬಂದಿ   ಮೂರು ದಿನದಿಂದ ರಾತ್ರಿ ಹಗಲು ಇಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವತ್ತು ರಾತ್ರಿಯೊಳಗೆ ಕೆಲಸ ಪೂರ್ಣಗೊಂಡರೆ ತತ್‌ಕ್ಷಣ ವಿದ್ಯುತ್‌ಸಂಪರ್ಕ ದೊರೆಯಲಿದೆ.
– ಮೆಸ್ಕಾಂ ಅಧಿಕಾರಿಗಳು 

ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ
ಒಂದು ವಾರದಿಂದ ರಾತ್ರಿ ಕತ್ತಲಲ್ಲಿ ಇದ್ದೇವೆ. ನಮಗೆ ಮೋಬಂತ್ತಿಯೇ ಬೆಳಕು. ಸೊಳ್ಳೆ ಕಾಟ ಬೇರೆ. ಇಷ್ಟು ದಿನಗಳವರೆಗೆ ಕರೆಂಟ್‌ ಇಲ್ಲದೆ ದಿನ ಕಳೆದದ್ದು ಇದೇ ಮೊದಲು.  ಮೆಸ್ಕಂ ಅಧಿಕಾರಿಗಳು ಇಂದು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂದು ದಿನ ದೂಡುತ್ತಾ ಇದ್ದಾರೆ. ಈಗೀಗ ನಮಗೆ ನಂಬಿಕೆಯೇ ಕಳೆದು ಹೋಗಿದೆ.
– ಪುಷ್ಪಾ ಸುವರ್ಣ, ಮಲ್ಪೆ ಪಡುಕರೆ

Advertisement

Udayavani is now on Telegram. Click here to join our channel and stay updated with the latest news.

Next