Advertisement

ಇನ್ನಷ್ಟು ಹಚ್ಚ ಹಸುರಾಗಲಿದೆ ಮಲ್ಪೆ ಸೈಂಟ್‌ಮೇರಿ ದ್ವೀಪ

02:40 AM Jul 16, 2017 | Team Udayavani |

ಮಲ್ಪೆ: ಭೂಲೋಕದ ಕೌತುಕಗಳಲ್ಲೊಂದೆನಿಸಿದ ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೀಯ ಸ್ಥಳ ಮಲ್ಪೆಯ ಸೈಂಟ್‌ ಮೇರೀಸ್‌ ದ್ವೀಪ ಇನ್ನು ಮುಂದೆ ಸಂಪೂರ್ಣ ಹಚ್ಚ ಹಸಿರಿನ ತಾಣವಾಗಿ ಕಂಗೊಳಿಸಲಿದೆ. 

Advertisement

ತೆಂಗಿನ ಮರಗಳ ದ್ವೀಪ
ತೆಂಗಿನ ಮರಗಳ ಸಾಲು ತೋರಣದಿಂದ ಈ ಹಿಂದೆ ತೆಂಗಿನ ಮರಗಳ ದ್ವೀಪ (ಕೊಕೊನೆಟ್‌ ಐಲ್ಯಾಂಡ್‌) ಎಂದೇ ಕರೆಸಿಕೊಳ್ಳುತ್ತಿದ್ದ ಈ ದ್ವೀಪ ಇದೀಗ ಮತ್ತೆ ತನ್ನ ಗತ ವೈಭವವನ್ನು ಕಾಣಲಿದೆ. 

ಹಸಿರಿನ ತಾಣ
ಸುಮಾರು 15 ಎಕ್ರೆ ವಿಸ್ತಾರದ ಈ ಐತಿಹಾಸಿಕ ತಾಣವನ್ನು ಬೀಚ್‌ ನಿರ್ವಹಣೆಯ ಗುತ್ತಿಗೆಯನ್ನು ವಹಿಸಿಕೊಂಡ ಮಂತ್ರ ಟ್ರಾವೆಲ್‌ ಆ್ಯಂಡ್‌ ಟೂರಿಸಂ ಡವೆಲಪ್‌ಮೆಂಟ್‌ನ ಸುದೇಶ್‌ ಶೆಟ್ಟಿ ಅವರು ಹಸಿರಿನ ತಾಣವಾಗಿಸಲು ಆಸಕ್ತಿ ತೋರಿದ್ದು ಪ್ರವಾಸಿಗರಿಗೆ ಸಂತಸವನ್ನು ಉಂಟು ಮಾಡಿದೆ. 

ಉಲ್ಲಾಸ
ಬಿಸಿಲಿನ ಹೊಡೆತದಿಂದಾಗಿ ಹೆಚ್ಚು ಹೊತ್ತು ಸುತ್ತಾಡಲು ಹಿಂಜರಿಯುತ್ತಿದ್ದ ಪ್ರವಾಸಿಗರಿಗೆ ಇನ್ನು ಮುಂದೆ ತಂಪಾದ ವಾತಾವರಣ ಉಲ್ಲಾಸ ನೀಡಲಿದೆ. 

ಸುದಿನ 
ನೂರಾರು ಬಗೆಯ ಸಸ್ಯರಾಶಿಗಳು ಆಲಂಕಾರಿಕ ಗಿಡಗಳು ಆಹ್ಲಾದಕರ ಅನುಭವ ನೀಡಲಿದೆ. ಮುಳ್ಳುಗಂಟಿಗಳಿಂದ ಆವರಿಸಿದ್ದ ತಾಣ ಮುಂದೆ ಹಸಿರಿನಿಂದ ಕಂಗೊಳಿಸುವ ಸುದಿನ ಬರಲಿದೆ.

Advertisement

ಔಷಧೀಯ ಸಸ್ಯ
ಈಗಾಗಲೇ ಇಲ್ಲಿ ನೂರಾರು ವರ್ಷದ ಹಿಂದಿದ್ದ 150ಕ್ಕೂ ಹೆಚ್ಚು ಆಯುಷ್ಯ ಮುಗಿದಿರುವ ತೆಂಗಿನ ಮರಗಳು ಗಾಳಿಗೆ ಧರೆಗುರುಳಿದ್ದು ಆ ಜಾಗದಲ್ಲಿ  ತೆಗೆದು ಹೊಸ ತೆಂಗಿನ ಸಸಿಗಳನ್ನು ನೆಡಲಾಗಿದೆ.  ಹೆಚ್ಚಿನ ಕಡೆಗಳಲ್ಲಿ ಖಾಲಿ ಜಾಗವಿರುವಡೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದ್ದು ಇಲ್ಲಿರುವ ಕೆಲವೊಂದು ಔಷಧೀಯ ಸಸ್ಯಗಳನ್ನು ಮುಂದೆ ನೀರುಣಿಸಿ ರಕ್ಷಿಸಲಾಗುತ್ತದೆ ಗಿಡಗಳ ರಕ್ಷಣೆ, ನಿರ್ವಹಣೆ ಕೇವಲ ಮರಗಳನ್ನು ನೆಟ್ಟು ಸುಮ್ಮನೆ ಕೂರುವುದಿಲ್ಲ. 

ಗಿಡಗಳ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಸುಮಾರು 2000 ಲೀ ಟ್ಯಾಂಕಿನಲ್ಲಿ ನೀರನ್ನು ತುಂಬಿಸಿ ಬೋಟಿನಿಂದ ಐಲ್ಯಾಂಡಿಗೆ  ಕೊಂಡೊಯ್ಯಲಾಗುತ್ತದೆ. ಅದಕ್ಕಾಗಿಯೇ ಒಂದು ಬೋಟನ್ನು ಕೂಡ ಖರೀದಿಸಲಾಗಿದೆ. ಪ್ರತಿದಿನ  5 ರಿಂದ 6 ಟ್ಯಾಂಕ್‌ ನೀರನ್ನು (ಸುಮಾರು 12 ಸಾವಿರ ಲೀ ) ಅಲ್ಲಿರುವ ತೆಂಗಿನ ಮರಸೇರಿ ಎಲ್ಲ ಜಾತಿಯ ಗಿಡಗಳಿಗೆ ನೀರುಣಿಸಲಾಗುತ್ತದೆ. ಇದರ ನಿರ್ವಹಣೆಗೆಂದು ಮೂರು ಮಂದಿಯನ್ನು ಕೂಡ ನೇಮಿಸಲಾಗಿದೆ. 

ವಿವಿಧ ಗಿಡಗಳು
ದ್ವೀಪದ ಉತ್ತರ ಭಾಗದಲ್ಲಿ ಈಗಾಗಲೇ ಸುಮಾರು 300ಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ತೆಂಗಿನ ಸಸಿಗಳು, ಬಾದಾಮು ಗಿಡ, ಮಾವು, ಚಿಕ್ಕು, ಜಾಮ್‌, ನೇರಳೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಆಗಸ್ಟ್‌ ಅನಂತರ ಐಲ್ಯಾಂಡಿನ ದಕ್ಷಿಣ ಭಾಗದಲ್ಲೂ ಬೆಳಸಲಾಗುತ್ತದೆ 

ಫಲವತ್ತತೆ
ಇಲ್ಲಿನ ದ್ವೀಪ ಪ್ರದೇಶದಲ್ಲಿರುವ ಮಣ್ಣು ಫಲವತ್ತತೆಯಿಂದ ಕೂಡಿದ್ದು ಗೊಬ್ಬರದ ರೀತಿಯಲ್ಲಿರುವ ಈ ಮಣ್ಣಿನಲ್ಲಿ  ಗಿಡಗಳಿಗೆ ಸರಿಯಾದ ರೀತಿಯಲ್ಲಿ ನೀರುಣಿಸಿದರೆ ಯಾವ ಜಾತಿಯ ಗಿಡವನ್ನು ಕೂಡ ಬೆಳೆಸಿದರೂ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಐಲ್ಯಾಂಡ್‌ನ್ನು ಪೂರ್ಣ ಗ್ರೀನರಿಯಾಗಿಸುವುದು ಮತ್ತು ಪ್ರವಾಸಿಗರಿಗೆ ನೆರಳು ನೀಡುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಇಲ್ಲಿದ್ದ ಪೊದೆ ಮುಳ್ಳುಗಂಟಿಗಳನ್ನು ತೆರವುಗೊಳಿಸಲಾಗಿದೆ. ಖಾಲಿ ಜಾಗವಿದ್ದಲ್ಲಿ ಎಲ್ಲ ಕಡೆ ಗಿಡ ಮರಗಳನ್ನು ಬೆಳೆಸಿ ತಂಪಿನ ವಾತಾವರಣ ಸೃಷ್ಟಿಯಾಗುವುದರಿಂದ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವಾಟರ್‌ ನ್ಪೋರ್ಟ್ಸ್ ಸೇರಿದಂತೆ ಇನ್ನಷ್ಟು ಮನೋರಂಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ.
– ಸುದೇಶ್‌ ಶೆಟ್ಟಿ , ಬೀಚ್‌ ನಿರ್ವಾಹಕ

Advertisement

Udayavani is now on Telegram. Click here to join our channel and stay updated with the latest news.

Next