Advertisement

ಇಲ್ಲಿ ಚರಂಡಿ ಹುಡುಕಾಟವೇ ಕಷ್ಟ

04:53 PM Sep 13, 2022 | Team Udayavani |

ಮಲ್ಪೆ: ಅಂಬಲಪಾಡಿ ಗ್ರಾಮ ಪಂಚಾಯತ್‌ ಕಿದಿಯೂರು, ಮೂಡನಿಡಂಬೂರು ಸೇರಿ ಒಟ್ಟು ಮೂರು ಗ್ರಾಮವನ್ನೊಳಗೊಂಡಿದೆ. ಆದರೂ ಮೂಡನಿಡಂಬೂರಿನ ಒಂದು ವಾರ್ಡ್‌ ಮಾತ್ರ ಇಲ್ಲಿಗೆ ಸೇರಿದೆ.

Advertisement

ಈ ಗ್ರಾಮದಲ್ಲಿ ಮಹಿಳೆಯರೇ ಹೆಚ್ಚು. ಶೇ. 100 ರಷ್ಟು ಸಾಕ್ಷರತೆ ಹೊಂದಿದ ವಿಶೇಷ ಗ್ರಾಮ. 2011ರ ಜನಗಣತಿ ಪ್ರಕಾರ 3530 ಪುರುಷರಿದ್ದರೆ, 3625 ಮಹಿಳೆಯರು ಇದ್ದಾರೆ. ಗ್ರಾಮದ ಒಟ್ಟು ವಿಸ್ತೀರ್ಣ  1204.66 ಎಕ್ರೆ.

ಗ್ರಾಮದೊಳಗೆ ಒಂದು ಸುತ್ತು ಹಾಕಿಬಂದರೆ ಮೊದಲು ಕಾಣಿಸುವುದು ಚರಂಡಿ ವ್ಯವಸ್ಥೆ ಇಲ್ಲದಿರುವುದು. ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಚರಂಡಿಯೇ ಇಲ್ಲ. ಕಿದಿಯೂರಿನಿಂದ ಕಡೆಕಾರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಮಳೆನೀರು ರಸ್ತೆ ಮೇಲೆಯೇ ಹರಿದುಹೋಗಬೇಕು. ಇದರಿಂದ ರಸ್ತೆಗೆ ಹಾಕಿದ ಡಾಮರು ಕಿತ್ತು ಹೋಗಿ ವಾಹನ ಸಂಚಾರರಿಗೆ ಸಮಸ್ಯೆಯಾಗುತ್ತದೆ. ಜತೆಗೆ ಶಾಲಾ ಮಕ್ಕಳೂ ಸೇರಿದಂತೆ ಪಾದಚಾರಿಗಳು ನೀರನ್ನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿ ಎದುರು ಬರುತ್ತಿರುವ ವಾಹನಗಳಿಗೆ ಢಿಕ್ಕಿ ಹೊಡೆಯುದುಂಟು.

ಶಾಶ್ವತ ಪರಿಹಾರ ಬೇಕು

ಮಜ್ಜಿಗೆ ಪಾದೆ ಬಳಿಯ ತೋಡಿಗೆ ಕಟ್ಟಡಗಳ ದ್ರವ ತ್ಯಾಜ್ಯವನ್ನು (ಬಲಾಯಿ ಪಾದೆಯಿಂದ) ಬಿಡುವುದರಿಂದ ಸುತ್ತಲಿನ ಮನೆಗಳಲ್ಲಿ ಜನರು ವಾಸಿಸುವಂತೆಯೆ ಇಲ್ಲ. ನಿತ್ಯವೂ ದುರ್ವಾಸನೆಯಲ್ಲೇ ಕಟ್ಟಿಟ್ಟ ಬುತ್ತಿ. ಈ ಭಾಗದ ಮನೆಯ ಬಾವಿ ನೀರು ಸಹ ಹಾಳಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕಾಗಿದೆ.

Advertisement

ತಂಗುದಾಣ ನಿರ್ಮಿಸಿ

ಕಿದಿಯೂರಿನಿಂದ ಉಡುಪಿ ಕಡೆಗೆ ಪ್ರತಿದಿನ 60 ಟ್ರಿಪ್‌ ಬಸ್‌ ಇದ್ದರೂ ಕಿದಿಯೂರು ಜಂಕ್ಷನ್‌ನಲ್ಲಿ ಪ್ರಯಾಣಿಕರಿಗೆ ತಂಗುದಾಣ ಇಲ್ಲ. ಪ್ರಯಾಣಿಕರು ಬಿಸಿಲು ಮಳೆಗೆ ರಸ್ತೆ ಬದಿಯೋ, ಅಂಗಡಿಗಳ ಎದುರಿಸನ ಸ್ಥಳದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಇದು ಹಲವು ವರ್ಷದ ಬೇಡಿಕೆಯಾದರೂ ಇನ್ನೂ ಈಡೇರಿಲ್ಲ. ಇಲ್ಲಿ ಸರಕಾರಿ ಜಾಗ ಇಲ್ಲವೆಂದು ಸಂಬಂಧಪಟ್ಟ ಇಲಾಖೆ ಸಬೂಬು ನೀಡುತ್ತಾರೆ. ಸಂಬಂಧಪಟ್ಟ ಆಡಳಿತ ಖಾಸಗಿ ಜಾಗವನ್ನಾದರೂ ಖರೀದಿಸಿ ಜನರಿಗೆ ಉಪಯೋಗವಾಗುವ ತಂಗುದಾಣ ನಿರ್ಮಿಸಬೇಕು ಎಂಬುದು ಸ್ಥಳೀಯರಾದ ಟಿ. ಅಂಗಾರ ಅವರ ಆಗ್ರಹ.

ಕಸ ನಿರ್ವಹಣೆ

ಗ್ರಾಮದಲ್ಲಿ ಕಸ ನಿರ್ವಹಣೆ ಮತ್ತೂಂದು ದೊಡ್ಡ ಸಮಸ್ಯೆ. ಬಹುತೇಕ ಮಂದಿ ರಸ್ತೆ ಬದಿಯೇ ಎಸೆಯುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಪಂಚಾಯತ್‌ ನಲ್ಲಿ ಕಸ ಸಂಗ್ರಹಣೆಗೆ ವಾಹನ ಇದ್ದರೂ, ಮನೆ ತೆರಿಗೆಯಡಿ ಕಸ ಸಂಗ್ರಹಣ ಶುಲ್ಕ ಹೆಚ್ಚಳದಿಂದಾಗಿ ನಾಗರಿಕರಿಗೆ ಹೊರೆಯಾಗಿದೆ ಎನ್ನಲಾಗುತ್ತಿದೆ. ಮಾಸಿಕ 100ರಂತೆ ವರ್ಷಕ್ಕೆ 1200 ತೆರಬೇಕು. ಶುಲ್ಕವನ್ನು ಕಡಿಮೆ ಮಾಡಿದರೆ ಎಲ್ಲ ಮನೆಯವರು ತ್ಯಾಜ್ಯವನ್ನು ಕೊಟ್ಟಾರು ಎನ್ನುತ್ತಾರೆ ನಾಗರಿಕರು.

ಇತರ ಸಮಸ್ಯೆಗಳು

-ಗ್ರಾಮದ ಬಹುತೇಕ ಕಡೆಯ ರಸ್ತೆಯ ಉದ್ದಕ್ಕೂ ಬಾಗಿದ ಮರಗಳು ಗಾಳಿ ಮಳೆಗೆ ವಿದ್ಯುತ್‌ ತಂತಿಗೆ ತಾಗಿ ಕಡಿದು ಬೀಳುವ ಸಾಧ್ಯತೆ ಇದೆ. ಇದು ಪ್ರಾಣಾಪಾಯಕ್ಕೂ ಎಡೆ ಮಾಡಿಕೊಡುತ್ತದೆ.

-ಗ್ರಾಮ ಕೆರೆಗಳನ್ನು ಹೂಳೆತ್ತಲುವ ಕೆಲಸ ಆಗಬೇಕಿದೆ. ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಕೆರೆಯಲ್ಲಿ ಹೂಳು ತುಂಬಿದ್ದು ಮಳೆಗಾಲ ಬಳಿಕ ನೀರು ಇರದು. ಕಿದಿಯೂರು ಗರೋಡಿ ಬಳಿ ಕಡಲ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಿದೆ.

-ಬೆಳಗ್ಗೆ 8ರಿಂದ 10, ಸಂಜೆ 4ರಿಂದ 6ಗಂಟೆಯ ಮಧ್ಯೆ ಕಿದಿಯೂರು-ಉಡುಪಿ ಮಧ್ಯೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ವೇಳೆಯಲ್ಲಿ ಕಾರ್ಮಿಕರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ನಿಂತು ಸಾಗುವ ಸ್ಥಿತಿ ಇದೆ. ಸರಕಾರಿ ಬಸ್‌ಗಳನ್ನು ಈ ಮಾರ್ಗದಲ್ಲಿ ಹೆಚ್ಚಿಸಬೇಕೆಂಬುದು ನಾಗರಿಕರ ಅಭಿಪ್ರಾಯ.

-ಅಂಬಲಪಾಡಿ ಕುಂಜಗುಡ್ಡೆಯಲ್ಲಿ ರಸ್ತೆಗಳು ದುರಸ್ತಿಯಾಗಬೇಕಿದೆ. ರಸ್ತೆಬದಿ ಎಸೆದು ಹೋದ ತ್ಯಾಜ್ಯಗಳು ಮಳೆಗೆ ಕೊಳೆತು ನಾರುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು.

-ಮಜ್ಜಿಗೆಪಾದೆಯಿಂದ ಮೇಲೆ ಅಂಬಲಪಾಡಿಗೆ ಹೋಗುವ 2 ವರ್ಷದ ಹಿಂದೆ ನಿರ್ಮಾಣಗೊಂಡ ಕಾಂಕ್ರಿಟ್‌ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಕಿತ್ತು ಹೋಗಿದೆ. ಈ ಭಾಗದ ರಸ್ತೆಯ ಅಂಚಿನಲ್ಲಿ ತಡೆಗೋಡೆ ಇಲ್ಲದೆ ವೇಗವಾಗಿ ಬಂದ ವಾಹನಗಳು ಬದಿಗೆ ಸರಿದರೆ ಕೆಳಕ್ಕೆ ಉರುಳಿ ಬೀಳುವ ಸಾಧ್ಯತೆ ಇದೆ.

-ಮಜ್ಜಿಗೆಪಾದೆ ಸೇತುವೆ ಸಮೀಪದ ತೋಡಿನಲ್ಲಿ ಬಂಡೆ ಕಲ್ಲು ಇರುವುದರಿಂದ ಅಗಲ ಕಡಿಮೆಯಾಗಿ ಜೋರಾದ ಮಳೆ ನೀರು ಹರಿಯಲು ತಡೆಯಾಗಿ ನೆರೆ ನೀರು ನಿಲ್ಲುತ್ತಿದೆ. ಇಲ್ಲಿನ ಬಂಡೆ ಕಲ್ಲನ್ನು ಒಡೆದು ಆಗಲಗೊಳಿಸಿದರೆ ಉತ್ತಮ ಎನ್ನುತ್ತಾರೆ ಗಂಗಾಧರ ಕಿದಿಯೂರು.

-ಕಿದಿಯೂರಿನಿಂದ ಸಂಕೇಶಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್‌ ರಸ್ತೆ ಕುಸಿದು ಬಿದ್ದು ಸಂಪರ್ಕ ಕಡಿದುಕೊಂಡು 3 ತಿಂಗಳಾದರೂ ಸಂಬಂಧಪಟ್ಟ ಆಡಳಿತ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಹಾಗಾಗಿ ಸಂಚರಿಸಲು ದ್ವಿಚಕ್ರಗಳೇ ಗತಿ. ರಿಕ್ಷಾ ಅಥವಾ ಇನ್ನಿತರ ವಾಹನಗಳು ಸಂಚರಿಸಲು ಆಗುವುದಿಲ್ಲ. ಈ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಜನರ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುತ್ತಾರೆ.

-ಕಿದಿಯೂರು ಸಂಕೇಶದಿಂದ ಬೊಟ್ಟಲಕ್ಕೆ ಅಡ್ಡವಾಗಿ ಒಂದು ಕಿಂಡಿ ಅಣೆಕಟ್ಟು ಇದೆ. ಹೊಸ ಕಿಂಡಿ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಿಷ್ಪ್ರಯೋಜಕ. ಅಗತ್ಯ ಇಲ್ಲದಿದ್ದರೂ ಕಿಂಡಿ ಅಣೆಕಟ್ಟು ಮಾಡಿ ಸರಕಾರದ ಹಣ ಪೋಲು ಮಾಡಲಾಗುತ್ತಿದೆ. ಇದರಿಂದ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮರಳು, ಮರ ಮತ್ತಿತರ ತ್ಯಾಜ್ಯಗಳು ಇಲ್ಲಿ ಬಂದು ನಿಲ್ಲುವುದರಿಂದ ನೀರಿನ ಹರಿವಿಗೆ ತಡೆಯೊಡ್ಡಲಿದೆ ಎನ್ನುತ್ತಾರೆ ಪ್ರದೀಪ್‌ ಟಿ. ಮೆಂಡನ್‌.

ಪ್ರಾಮಾಣಿಕ ಪ್ರಯತ್ನ: ದೂರದ ಪ್ರದೇಶದ ಮಂದಿ ಇಲ್ಲಿಗೆ ತಂದು ಕಸ ಹಾಕುವುದರಿಂದ ಸಮಸ್ಯೆಯಾಗುತ್ತಿದೆ. ಗ್ರಾಮದ ಕೆಲವೊಂದು ಸಮಸ್ಯೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. – ರೋಹಿಣಿ. ಅಧ್ಯಕ್ಷರು, ಅಂಬಲಪಾಡಿ ಗ್ರಾಮ ಪಂಚಾಯತ್‌

ಜನರ ಸಮಸ್ಯೆ ಆಲಿಸಿ: ಗ್ರಾಮದ ರಸ್ತೆಬದಿ ಚರಂಡಿ, ತಂಗುದಾಣ ಸೇರಿದಂತೆ ಕೆಲವು ಮೂಲ ಸೌಕರ್ಯ ಕಲ್ಪಿಸಬೇಕಿದೆ. ಚುನಾಯಿತ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಿಗೆ ಕನಿಷ್ಠ ವಾರಕ್ಕೊಮ್ಮೆ ಆದರೂ ಸಂಚರಿಸಿ ಜನರ ಸಮಸ್ಯೆ ಆಲಿಸಿ ನಿವಾರಿಸಬೇಕು. –ಟಿ. ಅಂಗರ, ಸ್ಥಳೀಯರು.

„ ನಟರಾಜ್‌ ಮಲ್ಪೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next