Advertisement

ಮಲ್ಪೆ ಬೀಚ್‌ ಉತ್ಸವಕ್ಕೆ ಸಂಭ್ರಮದ ತೆರೆ: ಪಾರ್ಕಿಂಗ್‌ ಸಮಸ್ಯೆ, ಟ್ರಾಫಿಕ್‌ ಜಾಮ್‌

12:41 AM Jan 23, 2023 | Team Udayavani |

ಮಲ್ಪೆ: ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ನಡೆದ ಮಲ್ಪೆ ಬೀಚ್‌ ಉತ್ಸವದಲ್ಲಿ ಸಮುದ್ರಕ್ಕೆ ಸವಾಲೆಸೆಯುವಂತೆ ಜನಸಾಗರವೇ ಹರಿದು ಬಂದಿತ್ತು. ಶುಕ್ರವಾರ ಆರಂಭ ಗೊಂಡ ಉತ್ಸವ ರವಿವಾರ ಮತ್ತಷ್ಟು ರಂಗೇರಿತ್ತು. ರವಿವಾರ ಮಧ್ಯಾಹ್ನದ ಬಳಿಕ ಬೀಚ್‌ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಣ್ಣು ಹಾಯಿಸಿದಷ್ಟು ದೂರ ಜನ ಸಮೂಹವೇ ಕಂಡು ಬಂದಿತು ಸುಮಾರು 60 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸಂಭ್ರಮಿಸಿದರು.

Advertisement

ಬೆಳಗ್ಗಿನಿಂದ ಸಂಜೆಯವರೆಗೂ ಬೀಚ್‌ನಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಬೀಚ್‌ ತ್ರೋಬಾಲ್‌, ಮರಳು ಶಿಲ್ಪ, ಚಿತ್ರಕಲೆ, ಶ್ವಾನ ಪ್ರದರ್ಶನ ನಡೆದವು. ವೈವಿಧ್ಯಮಯ ಆಹಾರಗಳನ್ನು ಸವಿಯುವ ಅವಕಾಶ ನೀಡಲಾಗಿತ್ತು. ಆಹಾರದ ಕೌಂಟರ್‌ಗಳಲ್ಲಿ ಸಾಗರೋತ್ಪನ್ನದ ರುಚಿ ಸವಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಾರ್ಕಿಂಗ್‌ ಸಮಸ್ಯೆ, ಟ್ರಾಫಿಕ್‌ ಜಾಮ್‌
ಬೀಚ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕಾರು ಹಾಗೂ ಇನ್ನಿತರ ಘನ ವಾಹನ ಪಾರ್ಕಿಂಗ್‌ಗೆ ವಡಭಾಂಡೇಶ್ವರ ಗಾಂಧಿ ಶತಾಬ್ದಿ ಮೈದಾನ, ಹಾಗೂ ಮಲ್ಪೆಯ ಸುತ್ತಸುತ್ತ ಪರಿಸರದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಕಾರಿನಿಂದ ಬಂದ ಜನ ಬೀಚ್‌ ವರೆಗೆ ನಡೆದುಕೊಂಡು ಬರಬೇಕಾಯಿತು. ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದರೂ ಪಾರ್ಕಿಂಗ್‌ ಸಮಸ್ಯೆ ಎದುರಾಗಿತ್ತು. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವುದು ಕಂಡು ಬಂತು.

ಮುಂಬಯಿಯ ಯಾಚ್‌ ಮಲ್ಪೆಯಲ್ಲಿ…!
ಮುಂಬಯಿಯ ರಾಯಲ್‌ ಮೈರನ್‌ ಕಂಪೆನಿಯ ಯಾಚ್‌ ಈಗ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದ್ದು, 2 ಬೆಡ್‌ ರೂಮ್‌, ಕಿಚನ್‌, ಕ್ಯಾಬಿನ್‌, ಡಾಕ್‌ ಸೌಲಭ್ಯವನ್ನು ಹೊಂದಿದೆ. ಮಲ್ಪೆಯಲ್ಲಿ ಮುಂದಿನ 20 ದಿನಗಳವರೆಗೆ ಇದು ಪ್ರವಾಸಿಗರಿಗೆ ಲಭ್ಯವಿರಲಿದೆ. ಶಾಸಕ ಕೆ. ರಘುಪತಿ ಭಟ್‌ ಯಾಚ್‌ ಉದ್ಘಾಟಿಸಿ ಪ್ರವಾಸಿಗರಿಗೆ ಐಷಾರಾಮಿ ಯಾಚ್‌ನ ಅನುಭವ ಪಡೆಯಲು ಸದಾವಕಾಶವನ್ನು ಒದಗಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್‌, ಎಸ್ಪಿ ಹಾಕೆ ಅಕ್ಷಯ್‌ ಮಚೀcಂದ್ರ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next