Advertisement

ಮಲ್ಪೆ ಬೀಚ್‌ ಉತ್ಸವಕ್ಕೆ ಚಾಲನೆ : ಕಡಲ ಕಿನಾರೆಯಲ್ಲಿ ಮನ ಸೆಳೆದ ಮೋಹಕ ಕಲರವ

11:42 PM Jan 20, 2023 | Team Udayavani |

ಮಲ್ಪೆ: ರಜತೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲೆಯು ಮುಂದಿನ 25 ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಹೊಂದಲು ದೂರದೃಷ್ಟಿ ಯೋಚನೆಯ ಜತೆಗೆ ಯೋಜನೆಯೂ ಬೇಕು ಮತ್ತು ಮುಂದೆ ಬರಲಿರುವ ಜನಪ್ರತಿನಿಧಿಗಳ ಮೇಲೂ ಮಹತ್ತರ ಜವಾಬ್ದಾರಿಯಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ಮಲ್ಪೆ ಬೀಚ್‌ನಲ್ಲಿ ಜ. 20ರಿಂದ 22ರ ವರೆಗೆ ಹಮ್ಮಿಕೊಂಡಿರುವ “ರಜತ ಉಡುಪಿ-ಬೀಚ್‌ ಉತ್ಸವ’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಯೋಚನೆ, ಯೋಜನೆಯ ಜತೆಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಮುಂದಿನ ಪೀಳಿಗೆಗೆ ನಾವೇನು ನೀಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಘುಪತಿ ಭಟ್‌, ರಜತೋತ್ಸವದ ಆಚರಣೆಯ ಸಮಾರೋಪವು ಕಾರ್ಕಳದ ಬೈಲೂರಿನಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಯೊಂದಿಗೆ ನೆರವೇರಲಿದೆ. ಉಡುಪಿ ಹೊಸ ಜಿಲ್ಲೆಯಾದ ಪ್ರತಿಫಲ ಆಡಳಿತಾತ್ಮಕವಾಗಿ ಜನರಿಗೆ ಸಿಕ್ಕಿದೆ. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ಉಡುಪಿ ಜಿಲ್ಲೆ ಸುವರ್ಣ ಮಹೋತ್ಸವ ಆಚರಿಸಲಿದೆ. ಈ ಅವಧಿಗೆ ಜಿಲ್ಲೆ ದೇಶದಲ್ಲೇ ಮುಂದೆ ಬರಬೇಕು. ಮುಂದಿನ 25 ವರ್ಷಗಳ ಜಿಲ್ಲೆಯ ಅಭಿವೃದ್ಧಿ ವರ್ಕ್‌ ಪ್ಲಾನ್‌ ಸಿದ್ಧಪಡಿಸಬೇಕಿದೆ. ಸ್ಥಳೀಯರಿಗೆ ಉದ್ಯೋಗ, ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡುವುದೇ ಉತ್ಸವದ ಮೂಲ ಉದ್ದೇಶ ಎಂದರು.

ಮುಂದುವರಿಯಲಿದೆ
ಬೀಚ್‌ ಉತ್ಸವ ಹಿನ್ನೆಲೆಯಲ್ಲಿ ವಿದೇಶದಿಂದ ಫ್ಲೈ ಬೋರ್ಡ್‌, ಕ್ಲಿಪ್‌ ಡೈವ್‌, ಸ್ಕೂಬಾ ಡೈವ್‌, ಐಶಾರಾಮಿ ಪ್ರವಾಸಿ ಬೋಟ್‌ ತರಿಸಲಾಗಿದೆ ಮತ್ತು ಮುಂದಿನ ಒಂದು ತಿಂಗಳು ಅದೆಲ್ಲವೂ ಮುಂದುವರಿಯಲಿದೆ. ಇದರ ನಿರ್ವಹಣೆಗೆ ಸ್ಥಳೀಯರಿಗೆ ತರಬೇತಿ ನೀಡಲಿದ್ದೇವೆ ಎಂದರು.

Advertisement

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್‌ ಸ್ವಾಗತಿಸಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ವಂದಿಸಿದರು. ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಶೆಟ್ಟಿ ನಿರೂಪಿಸಿದರು.

ಬೀಚ್‌ ಉತ್ಸವದ ಹೈಲೈಟ್ಸ್‌
ನಿಯಾನ್‌ ಲೈಟಿಂಗ್‌, ಫ್ಲೆ„ ಬೋರ್ಡ್‌, ಸೈಂಟ್‌ ಮೇರಿಸ್‌ ಐಲ್ಯಾಂಡ್‌ನ‌ಲ್ಲಿ ಕ್ಲಿಪ್‌ ಡೈವ್‌, ಯಾಚ್‌ ಸೇವೆ, ಸ್ಕೂಬಾ ಡೈವ್‌, ಓಪನ್‌ ಸೀ ವಾಟರ್‌ ಸ್ವಿಮ್ಮಿಂಗ್‌, ಜನರಲ್‌ ತಿಮ್ಮಯ್ಯ ಅಕಾಡೆಮಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕಯಾಕಿಂಗ್‌, ಮಹಿಳೆಯರ ತ್ರೋಬಾಲ್‌, ಚಿತ್ರಕಲಾ ಶಿಬಿರ, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಛಾಯಾಚಿತ್ರ ಪ್ರದರ್ಶನ, ವಿವಿಧ ಸ್ಪರ್ಧೆ, ಆಹಾರ ಮೇಳದಲ್ಲಿ ವಿವಿಧ ಖಾದ್ಯಗಳು, ಗಾಳಿಪಟ ಉತ್ಸವ ಹೀಗೆ ಹತ್ತಾರು ಚಟುವಟಿಕೆಗಳು ಇವೆ.

ಸಂಗೀತ ಸಂಜೆ
ಮಲ್ಪೆ ಕಡಲ ಕಿನಾರೆಯಲ್ಲಿ ಶುಕ್ರವಾರ ಇಳಿಸಂಜೆ ಗಾಯಕ ರಾಜೇಶ್‌ ಕೃಷ್ಣನ್‌ ಮತ್ತು ತಂಡದಿಂದ ಸಂಗೀತ ರಸಮಂಜರಿ ಸಭಿಕರನ್ನು ಮನಸೂರೆಗೊಳಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next