ಮಣಿಪಾಲ: ಜಿಲ್ಲೆಯ ರಜತೋತ್ಸವದ ಸಮಾರೋಪವನ್ನು ಅರ್ಥೈಪೂರ್ಣವಾಗಿ ಆಚರಿಸಲು ಜ.20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್ ಉತ್ಸವ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಮತ್ತು ಉಡುಪಿ ಶಾಸಕ ಕೆ. ರಘುಪತಿ ಭಟ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ವಿಶೇಷವಾಗಿ ಸೈಂಟ್ ಮೇರೀಸ್ ದ್ವೀಪದಲ್ಲಿ ಕ್ಲಿಫ್ ಡೈವ್ ಹಾಗೂ ಕಾಪುವಿನಲ್ಲಿ ಸ್ಕೂಬಾ ಡೈವ್ ಹಮ್ಮಿಕೊಂಡಿದ್ದೇವೆ. ಕ್ಲಿಫ್ಡೈವ್ ನಿರಂತರವಾಗಿ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲೂ ಕ್ರಮ ಆಗುತ್ತಿದೆ. ಇದರಿಂದ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಲು ಅನುಕೂಲವಾಗಲಿದೆ. ಹಾಗೆಯೇ ಜಿಲ್ಲೆಯ ವಿವಿಧ ಭಾಗದಲ್ಲಿ ಹೊಸ ಪ್ರವಾಸಿ ಸ್ಥಳಗಳನ್ನು ಗುರುತಿಸುವ ಕಾರ್ಯ ಆಗುತ್ತಿದೆ ಎಂದರು.
ಜ.21ರಂದು ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಸ್ಮಿಮ್ಮಿಂಗ್ ಅಸೋಸಿಯೇಶನ್ ಜತೆ ಸೇರಿ ಸಮುದ್ರದಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ ನಡೆಯಲಿದೆ. 5ಕಿ.ಮೀ, 7.5 ಕಿ.ಮೀ., 10 ಕಿ.ಮೀ. ಹಾಗೂ 1.25 ಕಿ.ಮೀ. ರೀಲೆ ಕೂಡ ಇರಲಿದೆ. ಇದರ ಜತೆಗೆ ಪ್ರತಿ ದಿನ ಸಂಜೆ ಸ್ಥಳೀಯರಿಗೆ ಕಬಡ್ಡಿ ಸಹಿತ ವಿವಿಧ ಸ್ಪರ್ಧೆಗಳು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯಲಿದೆ ಎಂದು ಹೇಳಿದರು.
ಆರ್ಟ್ ಕ್ಯಾಂಪ್, ಪೈಂಟಿಂಗ್, ಫೋಟೋಗ್ರಫಿ, ಮರಳು ಕಲಾಕೃತಿ ಪ್ರದರ್ಶನ, ವಿವಿಧ ಬಗೆಯ ವಾಟರ್ ಸ್ಪೋರ್ಟ್ಸ್, ಜಿಪ್ ಲೈನ್, ಆಂಗ್ಲಿಂಗ್, ಗಾಳಿಪಟ ಉತ್ಸವ, ಆಹಾರ ಮೇಳೆದ ಜತೆಗೆ ಹತ್ತಾರು ಬಗೆಯ ಕಾರ್ಯಕ್ರಮಗಳನ್ನು ಸ್ಥಳೀಯರ ಹಾಗೂ ಸ್ಥಳೀಯ ಭಜನೆ ಮಂಡಳಿಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.
Related Articles
ಪಾರ್ಕಿಂಗ್ ಉಚಿತ
ಬೀಚ್ ಉತ್ಸವದ ಹಿನ್ನೆಲೆಯಲ್ಲಿ ಜ.21 ಮತ್ತು 22ರಂದು ಪಾರ್ಕಿಂಗ್ ಉಚಿತ ವ್ಯವಸ್ಥೆ ಮಾಡಲಾಗುವುದು. ಸದ್ಯ ಇರುವ ಪಾರ್ಕಿಂಗ್ ಪ್ರದೇಶದ ಜತೆಗೆ ಖಾಸಗಿ ಜಾಗವನ್ನು ಗುರುತಿಸಿ ಪಾರ್ಕಿಂಗ್‌ಗೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ರೀತಿಯ ಟ್ರಾಫಿಕ್ ಜಾಮ್ ಆಗದಂತೆಯೂ ನೋಡಿಕೊಳ್ಳಲಿದ್ದೇವೆ ಎಂದು ಹೇಳಿದರು.
ಡಾಗ್ ಶೋ
ಈ ವರ್ಷ ವಿಶಷವಾಗಿ ವಿವಿಧ ಬಗೆಯ ಶ್ವಾನಗಳ ಪ್ರದರ್ಶನ ಇರಲಿದೆ. ಇದರೊಂದು ದೊಡ್ಡ ಮಟ್ಟದ ಸ್ಪರ್ಧೆಯ ರೂಪದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ., ತೃತೀಯ 15 ಸಾವಿರ ರೂ. ಹಾಗೂ ನಾಲ್ಕನೇ ಬಹುಮಾನವಾಗಿ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ
ಮೂರು ದಿನ ಸಂಜೆ 6ರಿಂದ 11 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಜಮಂಜರಿ, 2ನೇ ದಿನ ಕುನಾಲ್ ಗಾಂಜವಾಲಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಕೊನೆಯ ದಿನ ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ನಿರ್ಮಿತಿ ಕೇಂದ್ರ ಯೋಜನ ನಿರ್ದೇಶಕ ಅರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಡಾ| ರೋಶನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.