Advertisement

ಮಲ್ಪೆ ಬೀಚ್‌: ಕಣ್ಣು ಕಳೆದುಕೊಂಡ ಸಿಸಿ ಕೆಮರಾ

06:00 AM Aug 11, 2018 | |

ಮಲ್ಪೆ: ಸಾರ್ವಜನಿಕರ ಸುರಕ್ಷತೆಯ ನಿಟ್ಟಿನಲ್ಲಿ ಮಲ್ಪೆ ಬೀಚ್‌ನ ಪ್ರಮುಖ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾ ಕೆಟ್ಟುಹೋಗಿ 4 ತಿಂಗಳು ಕಳೆದರೂ ಇನ್ನೂ ದುರಸ್ತಿ ಕಾರ್ಯ ನಡೆಯದಿರುವುದು ಕಳ್ಳತನ, ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

Advertisement

ಆರಂಭದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಎರಡು ವರ್ಷಗಳ ವರೆಗೆ ಸರಿಯಾಗಿಯೇ ಇತ್ತು. ಕ್ರಮೇಣ ಉಪ್ಪು ನೀರಿನ ಅಂಶ ಕೆಮರಾದ ಲೆನ್ಸ್‌ಗೆ ಸೇರಿದ್ದರಿಂದ ಒಂದು ವರ್ಷದಿಂದ ಒಂದೊಂದೇ ಕೆಮರಾಗಳು ಕಣ್ಣುಮುಚ್ಚಿಕೊಂಡವು. ಇದೀಗ ಒಂದು ತಿಂಗಳ ಹಿಂದೆ ಉಳಿದೆಲ್ಲವೂ ಹಾಳಾಗಿ ಹೋಗಿದ್ದು ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.

ಮೂರು ವರ್ಷದ ಹಿಂದೆ ಅಳವಡಿಕೆ
ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೀಯ ತಾಣವಾದ ಮಲ್ಪೆ ಬೀಚ್‌ಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ನಿತ್ಯ ಸಾವಿರಾರು ಸಂಖ್ಯೆ ಪ್ರವಾಸಿಗರು ಬರುತ್ತಾರೆ. ಕಳ್ಳತನ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಹಾಗೂ ಪ್ರವಾಸಿಗರಿಗೆ ಹೆಚ್ಚು ಸುರಕ್ಷತೆಯ ನಿಟ್ಟಿನಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಮೂರು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಬೀಚ್‌ನಲ್ಲಿ 8 ಕಡೆಗಳಲ್ಲಿ ಸಿಸಿ ಕೆಮರಾವನ್ನು ಅಳವಡಿಸಲಾಗಿತ್ತು. ಮಲ್ಪೆ ಬೀಚ್‌ ಸಿಸಿ ಕೆಮರಾ ಅಳವಡಿಸಿದ ಕರ್ನಾಟಕದ ಪ್ರಥಮ ಬೀಚ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಕೆಮರಾ ಎಲ್ಲೆಲ್ಲಿ ಇದ್ದವು
ಕಡಲತೀರದಲ್ಲಿ 5, ಪಾರ್ಕಿಂಗ್‌ ಪ್ರದೇಶದಲ್ಲಿ 2 ಮತ್ತು ಮುಖ್ಯ ದ್ವಾರದ ಬಳಿ 1 ಕೆಮರಾವನ್ನು ಆಳವಡಿಸಲಾಗಿತ್ತು. ಇದರ ಚಲನ ವಲನವನ್ನು ಮಲ್ಪೆ ಪೊಲೀಸ್‌ ಠಾಣೆ ನಿರ್ವಹಿಸುತ್ತಿತ್ತು.

ಹೆಚ್ಚುತಿದೆ ಕಳ್ಳತನ ಪ್ರಕರಣ
ಈ ಹಿಂದೆ ಮಲ್ಪೆ ಬೀಚ್‌ನಲ್ಲಿ ಕಳ್ಳತನದ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದವು. ಸಿಸಿ ಕೆಮರಾ ಅಳವಡಿಸಿದ ಬಳಿಕ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತೆನ್ನಲಾಗಿದೆ. ಇದೀಗ ಕೆಲವು ತಿಂಗಳಿಂದ ಕಳ್ಳತನದ ಪ್ರಕರಣಗಳು ಮತ್ತೆ ನಡೆಯುತ್ತಿವೆ ಯಾದರೂ ಕೆಲವೇ ಮಂದಿ ಮಾತ್ರ ದೂರು ದಾಖಲಿಸುತ್ತಾರೆ. ಗುರುವಾರ ಸಂಜೆ ಮಂಗಳೂರು ಫೂಟೋಗ್ರಾಫರ್‌ ಓರ್ವರ ಬೆಲೆಬಾಳುವ ಕೆಮರಾ ಲೆನ್ಸ್‌ ಕಳವು ಮಾಡಲಾಗಿತ್ತು.

Advertisement

ಮಲ್ಪೆ ಬೀಚ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದು ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೀಚ್‌ನಲ್ಲಿ ಕೆಮರಾ ಕೆಟ್ಟು ಹೋದ ಹಿನ್ನೆಲೆಯಲ್ಲಿ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಳಾಗಿ ನಿಂತಿರುವ ಕೆಮರಾಗಳನ್ನು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಮರಾದ ಲೆನ್ಸ್‌ಗೆ ಸಮುದ್ರದಲ್ಲಿನ ಉಪ್ಪಿನ ಅಂಶ ಸೇರಿಕೊಳ್ಳುವುದರಿಂದ ಲೆನ್ಸ್‌ ಬೇಗನೆ ಹಾಳಾಗುತ್ತದೆ. ಕೇಬಲ್‌ಗ‌ಳು ಕೂಡ ಶಾರ್ಟ್‌ ಆಗುತ್ತಿದೆ. ಈ ಭಾಗದಲ್ಲಿ ಹೆಚ್ಚು ರಕ್ಷಣೆಯನ್ನು ಹೊಂದಿರುವ ಕೆಮರಾಗಳ ಅಗತ್ಯವಿದೆ. ಸ್ವದೇಶ ದರ್ಶನ ಯೋಜನೆಯಡಿ ಹೊಸ ಕೆಮರಾಗಳನ್ನು ಅಳವಡಿಸುವ ಯೋಜನೆಯು ಸಿದ್ಧವಾಗುತ್ತಿದೆ ಎಂದು ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ಸುರಕ್ಷೆಗಾಗಿ ಅಗತ್ಯ
ಕೆಮರಾ ಕೆಟ್ಟು ಹೋಗಿ 4 ತಿಂಗಳಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮತ್ತು ಯಾವುದೇ ಪ್ರಕರಣಗಳನ್ನು ಪತ್ತೆಹಚ್ಚಲು ಹೆಚ್ಚಿನ ನೆರವಾಗುತ್ತಿದ್ದು, ಮಲ್ಪೆ ಬೀಚ್‌ಗೆ ಸಿಸಿ ಕೆಮರಾ ಅತೀ ಅಗತ್ಯವಾಗಿದೆ. ಪೊಲೀಸರಿಗೆ ದಿನದ 24 ಗಂಟೆ ಇಲ್ಲಿದ್ದು ಎಲ್ಲ ಕಡೆ ನಿಗಾವಹಿಸಲು ಕಷ್ಟಸಾಧ್ಯ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿಗೆ ದೂರು ನೀಡಿದ್ದೇವೆ.
– ಮಧು ಬಿ. ಇ.,ಉಪನಿರೀಕ್ಷಕರು,ಮಲ್ಪೆ ಠಾಣೆ

ಅಳವಡಿಕೆ ಚಿಂತನೆ
ರಾಜ್ಯದ ಕರಾವಳಿಯ ಎಲ್ಲ ಬೀಚ್‌ಗಳಲ್ಲೂ ಸಿಸಿಟಿವಿ ಅಳವಡಿಸುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಕೇಂದ್ರ ಸರಕಾರದ ಸ್ವದೇಶ್‌ ದರ್ಶನ ಯೋಜನೆಯಡಿಯಲ್ಲಿ 62ಲಕ್ಷ ರೂ. ಅನುದಾನ ದೊರೆಯಲಿದೆ. ಎಲ್ಲಿ ಯಾವ ಆಯಾಮದಲ್ಲಿ ಹೇಗೆ ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ. ಮಲ್ಪೆ, ಮರವಂತೆ, ಕಾಪು, ಪಡುಬಿದ್ರೆ, ತ್ರಾಸಿ, ಸೋಮೇಶ್ವರ, ಒತ್ತಿನೆಣೆ ಪ್ರಮುಖವಾದ ಕೇಂದ್ರವಾಗಿದೆ.ಸಮೀಕ್ಷೆಯನ್ನು ಆಧರಿಸಿ ಟೆಂಡರ್‌ ಕರೆಯಲಾಗುವುದು. ಈ ಬಗ್ಗೆ ಉಡುಪಿ ಎಸ್ಪಿ ಜತೆ ಸಭೆ ನಡೆಸಿ ಚರ್ಚಿಸಲಾಗಿದೆ. ಎರಡು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಟೆಂಡರ್‌ ತೆಗೆದುಕೊಂಡವರಿಗೆ 5 ವರ್ಷದವರೆಗೆ ನಿರ್ವಹಣೆಗೆ ಕೊಡಲಾಗುತ್ತದೆ. ಆ ಬಳಿಕ ಮಲ್ಪೆ ಬೀಚ್‌ನ ಸಮಸ್ಯೆಯೂ ಪರಿಹಾರಗೊಂಡಂತಾಗುತ್ತದೆ
– ಅನಿತಾ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next