Advertisement

ಕರಾವಳಿಯ ವಿವಿಧೆಡೆ ವೀಕ್ಷಣೆ; ನಭದಲ್ಲಿ ಕೌತುಕ ಮೂಡಿಸಿದ ಸೂರ್ಯಗ್ರಹಣ

01:01 AM Oct 26, 2022 | Team Udayavani |

ಮಂಗಳೂರು/ಪಣಂಬೂರು: ದೀಪಾವಳಿ ಅಮಾವಾಸ್ಯೆ ದಿನವಾದ ಮಂಗಳವಾರ ನಭದಲ್ಲಿ ಸಂಭವಿಸಿದ ಪಾರ್ಶ್ವ ಸೂರ್ಯಗ್ರಹಣದ ಕೌತುಕ ಕರಾವಳಿಯಾದ್ಯಂತ ಕುತೂಹಲ ಮೂಡಿಸಿತು.

Advertisement

ದ.ಕ. ಜಿಲ್ಲೆಯಾದ್ಯಂತ ಆಸಕ್ತರು ಸೂರ್ಯಗ್ರಹಣವನ್ನು ಕಣ್ತುಂಬಿ ಕೊಂಡರೆ ವಿವಿಧ ದೇವಸ್ಥಾನಗಳಲ್ಲಿ ದೇವರ ದರ್ಶನ, ನಿತ್ಯಪೂಜೆ ಹಾಗೂ ಧಾರ್ಮಿಕ ಅನುಷ್ಠಾನದಲ್ಲಿ ಸಮಯ ಬದಲಾವಣೆ ಮಾಡಲಾಗಿತ್ತು. ಸೂರ್ಯ ಗ್ರಹಣ ಮುಗಿದ ಬಳಿಕ ಬಹುಮಂದಿ ಭಕ್ತರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೊನೆಕ್ಷಣದಲ್ಲಿ ಬರಿಗಣ್ಣಲ್ಲೂ ವೀಕ್ಷಣೆ
ಮಂಗಳವಾರ ಸಂಜೆ ಸಂಭವಿಸಿದ ಪಾರ್ಶ್ವ ಸೂರ್ಯಗ್ರಹಣ ವೀಕ್ಷಣೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಪಣಂಬೂರು ಕಡಲತೀರದಲ್ಲಿ ವ್ಯವಸ್ಥೆ ಮಾಡ ಲಾಗಿತ್ತು. ಗ್ರಹಣವನ್ನು ವೀಕ್ಷಿಸಲೆಂದು ತಯಾರಿಸಿದ ಸೌರ ಕನ್ನಡಕಗಳು, ಪಿನ್‌ ಹೋಲ್‌ ಪ್ರೊಜೆಕ್ಟರ್‌ ಮತ್ತು ಸೋಲಾರ್‌ ಫಿಲ್ಟರ್‌ ಅಳವಡಿಸಿದ ದೂರದರ್ಶಕಗಳ ಮೂಲಕ ಗ್ರಹಣ ವನ್ನು ಹಲವು ಆಸಕ್ತರು ಕಣ್ತುಂಬಿ ಕೊಂಡರು. ಬೀಚ್‌ಗೆ ಆಗ ಮಿಸಿದ ಪ್ರವಾಸಿಗರು ಕೂಡ ಸೂರ್ಯ ಗ್ರಹಣದ ಕುತೂಹಲವನ್ನು ಕಂಡು ಬೆರಗಾದರು. ಈ ಮಧ್ಯೆ ಸೂರ್ಯಾಸ್ತ ಸಂದರ್ಭದ ಕೊನೆಯ 10 ನಿಮಿಷ ಸೂರ್ಯನ ಪ್ರಖರತೆ ಕಡಿಮೆ ಇದ್ದ ಕಾರಣ ಬರಿಗಣ್ಣಿನಿಂದಲೇ ಗ್ರಹಣ ವೀಕ್ಷಿಸಲು ಸಾಧ್ಯವಾಯಿತು. ಸೂರ್ಯಾಸ್ತದ ಸಮಯವಾದ್ದರಿಂದ ದಿಗಂತವು ಶುಭ್ರವಾಗಿ ಗೋಚರಿಸಿತು. ಸೂರ್ಯಗ್ರಹಣದ ಕುರಿತು ಪಿಲಿಕುಳ ಪ್ರದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌ ಮಾಹಿತಿ ನೀಡಿದರು. ಪ್ರಾದೇಶಿಕ ಕೇಂದ್ರದ ಕ್ಯುರೇಟರ್‌ ಜಗನ್ನಾಥ್‌, ಸೈಂಟಿಫಿಕ್‌ ಆಫಿಸರ್‌ ವಿಘ್ನೇಶ್‌ ಭಟ್‌, ಶರಣಯ್ಯ, ಕಿಶೋರ್‌, ಶರತ್‌, ವಂದನಾ, ವಿಕ್ಟರ್‌, ಯತೀಶ್‌, ಶಿವರಾಮ್‌ ವಿಕ್ಷಣೆಗೆ ಸಹಕರಿಸಿದರು.

ಯೇನಪೊಯ ವಿ.ವಿ. ಸಹಯೋಗ ದಲ್ಲಿ ಬಲ್ಮಠದಲ್ಲಿರುವ ಯೇನಪೊಯ ಪದವಿ ಕಾಲೇಜಿನ 6ನೇ ಮಹಡಿಯಲ್ಲಿ ಸೂರ್ಯಗ್ರಹಣ ನೋಡಲು ವ್ಯವಸ್ಥೆ ಮಾಡಲಾಗಿತ್ತು. ಹಲವು ಆಸಕ್ತ ವಿದ್ಯಾರ್ಥಿಗಳು ಟೆಲಿಸ್ಕೋಪ್‌ ಸಹಾಯದಿಂದ ಗ್ರಹಣ ವೀಕ್ಷಿಸಿದರು.

ವಿದೌಟ್‌ ರಿಲೀಜನ್‌ ಆ್ಯಂಡ್‌ ಟ್ರಸ್ಟ್‌ ಮತ್ತು ದಕ್ಷಿಣ ಕನ್ನಡ ವಿಚಾರ ವಾದಿಗಳ ಅಸೋಸಿಯೇಶನ್‌ ಆಶ್ರಯದಲ್ಲಿ ನಗರದ ಲೇಡಿಹಿಲ್‌ ಬಳಿ ಗ್ರಹಣವನ್ನು ಸಾಮೂಹಿಕವಾಗಿ ವೀಕ್ಷಿಸಲಾಯಿತು.

Advertisement

ಜನ ಸಂಚಾರ ವಿರಳ!
ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಜನ ಸಂಚಾರವೂ ಕಡಿಮೆ ಇತ್ತು. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಯಾಗಿತ್ತು. ಕೆಲವು ಹೊಟೇಲ್‌ಗ‌ಳಿಗೆ ಗ್ರಾಹಕರು ಇಲ್ಲದೆ ಬಾಗಿಲು ಹಾಕಿದ್ದರೆ, ಇನ್ನೂ ಕೆಲವು ಹೊಟೇಲ್‌ಗ‌ಳು ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಅಂಗಡಿ ವ್ಯವಹಾರಕ್ಕೂ ಗ್ರಾಹಕರ ಕೊರತೆಯಿತ್ತು.

ಮಲ್ಪೆ ಬೀಚ್‌: ಸೂರ್ಯಗ್ರಹಣ
ವೀಕ್ಷಿಸಿ ಸಂಭ್ರಮಪಟ್ಟ ಜನ
ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಸೂರ್ಯಗ್ರಹಣ ವೀಕ್ಷಣೆ ಮತ್ತು ವಿಶ್ಲೇಷಣೆ ನಡೆ ಯಿತು. ಟೆಲಿಸ್ಕೋಪ್‌ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಸಾವಿರಾರು ವಿದ್ಯಾರ್ಥಿಗಳು, ಸಾರ್ವ ಜನಿಕರು ಜಮಾಯಿಸಿದ್ದರು.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ, ಅಮೆಚೂರ್‌ ಕ್ಲಬ್‌ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪೂರ್ಣಪ್ರಜ್ಞ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ 500ಕ್ಕೂ ಅಧಿಕ ಜನರಿಗೆ ಕನ್ನಡಕದ ವ್ಯವಸ್ಥೆ ಮಾಡಿತ್ತು. ವೀಕ್ಷಕರು ಗ್ರಹಣದ ವಿವರಣೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿ ಕೊಂಡರು. 8, 4 ಮತ್ತು 3 ಇಂಚಿನ ಟೆಲಿಸ್ಕೋಪನ್ನು ಸಾರ್ವಜನಿಕ ವೀಕ್ಷಣೆಗೆ ಮತ್ತು 3 ಇಂಚಿನ ಟೆಲಿ  ಸ್ಕೋಪನ್ನು ನೇರ ಪ್ರಸಾರಕ್ಕೆ ಇರಿಸಲಾಗಿತ್ತು. ಕಾಲೇಜಿನ 70 ಎನ್ನೆಸೆಸ್‌ ವಿದ್ಯಾರ್ಥಿಗಳಲ್ಲದೆ ಸಾವಿ ರಕ್ಕೂ ಅಧಿಕ ಮಂದಿ ಗ್ರಹಣವನ್ನು ವಿಕ್ಷಿಸಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್‌ ವೀಕ್ಷಣೆಗೆ ಚಾಲನೆ ನೀಡಿದರು. ಶಾಸಕ ರಘುಪತಿ ಭಟ್‌ ಉಪಸ್ಥಿತರಿದ್ದರು.
ಯಶ್‌ಪಾಲ್‌ ಎ. ಸುವರ್ಣ, ಡಾ| ಪಿ. ಶ್ರೀರಮಣ ಐತಾಳ, ಡಾ| ಎ.ಪಿ. ಭಟ್‌, ರಾಮಚಂದ್ರ, ಡಾ| ವಿನಯ ಕುಮಾರ್‌, ಅತುಲ್‌ ಭಟ್‌ ಪಾಲ್ಗೊಂಡಿದ್ದರು.

ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಗಂಗೊಳ್ಳಿಯ ಜುಮ್ಮಾ ಮಸೀದಿ ಯಲ್ಲಿ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next