Advertisement

4 ತಿಂಗಳಲ್ಲಿ 4 ಸಾವಿರ ಮಕ್ಕಳಿಗೆ ಅಪೌಷ್ಟಿಕತೆ; ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ ಸಮಸ್ಯೆ

11:15 PM Feb 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ವಿಚಾರ ಗಂಭೀರವಾಗುತ್ತಿದ್ದು,  ನಾಲ್ಕು ತಿಂಗಳಲ್ಲಿ 4 ಸಾವಿರಕ್ಕೂ ಅಧಿಕ ಅಪೌಷ್ಟಿಕ ಮತ್ತು ಕಡಿಮೆ ತೂಕದ ಮಕ್ಕಳನ್ನು ಪತ್ತೆ ಮಾಡಲಾಗಿದೆ. ಅದರಲ್ಲೂ 6 ವರ್ಷದ ಒಳಗಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

Advertisement

ಮಕ್ಕಳ ಅಪೌಷ್ಟಿಕತೆ ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡ ತಾಲೂಕು ಮಟ್ಟದ ಆರೋಗ್ಯ ತಪಾಸಣ ಶಿಬಿರಗಳಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗೆ ಆರೋಗ್ಯ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲೂÉ ಈ ಮಾಹಿತಿಯಿದೆ.

ರಾಜ್ಯದಲ್ಲಿ ಸೆಪ್ಟಂಬರ್‌ನಿಂದ ಜನವರಿ ವರೆಗೆ ಪತ್ತೆ ಮಾಡಲಾದ 6 ವರ್ಷದೊಳಗಿನ ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮತ್ತು ಕಡಿಮೆ ತೂಕ ಹೊಂದಿರುವ ಮಕ್ಕಳ ಪೈಕಿ ಉತ್ತರ ಕರ್ನಾಟಕ ಭಾಗ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಹೆಚ್ಚಾಗಿದ್ದಾರೆ. ಹೆಣ್ಣು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಪತ್ತೆಯಾಗಿದ್ದು ಹೇಗೆ?
ರಾಜ್ಯದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಆರೋಗ್ಯ ಇಲಾಖೆ 2021ರ ಸೆ.15ರಿಂದ 2022 ಜ.7ರ ವರೆಗೆ ಒಟ್ಟು 30 ಆರೋಗ್ಯ ತಪಾಸಣ ಶಿಬಿರಗಳನ್ನು ನಡೆಸಿದೆ. ಅದರಲ್ಲಿ 0-18 ವರ್ಷದ 11,533 ಮಕ್ಕಳು ಹಾಗೂ 0-6 ವರ್ಷದ 8,224 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 1,005 ಹಾಗೂ ಸಾಧಾರಣ ಅಪೌಷ್ಟಿಕತೆ ಹೊಂದಿರುವ ಆರು ವರ್ಷದೊಳಗಿನ  3,121 ಮಕ್ಕಳನ್ನು ಪತ್ತೆ ಮಾಡಲಾಗಿದೆ.  ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಸಾವಿರ ಮಕ್ಕಳನ್ನು  “ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ’ (ಎನ್‌ಆರ್‌ಸಿ)ಗಳಿಗೆ ದಾಖಲಿಸಲಾಗಿದೆ.

4 ತಿಂಗಳಲ್ಲಿ ತಪಾಸಣೆಗೆ ಒಳಪಟ್ಟ 6 ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಪ್ರಮಾಣ ಶೇ.12ರಷ್ಟಿದ್ದು, ಇದು ಕಳೆದ ವರ್ಷದ  ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ-ಅಂಶಗಳಿಗಿಂತ ಹೆಚ್ಚಾಗಿದೆ.

Advertisement

ಎಲ್ಲಿ ಹೆಚ್ಚು?
ಈ ಸಮಸ್ಯೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲಿ ತೀವ್ರವಾಗಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್‌, ಬಳ್ಳಾರಿ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

40 ಲಕ್ಷ ಮಕ್ಕಳಿಗೆ ವಿಟಮಿನ್‌ ಎ ಪೂಕೈಕೆ
9  ತಿಂಗಳು ಹಾಗೂ 15-59 ತಿಂಗಳ ಮಕ್ಕಳಲ್ಲಿನ  “ಇರುಳುಗಣ್ಣು’ ತಡೆದು ರೋಗನಿರೋಧಕ ಶಕ್ತಿ ವೃದ್ಧಿಸಲು ಕಳೆದ ವರ್ಷ 4.62 ಲಕ್ಷ ಮಕ್ಕಳಿಗೆ ವಿಟಮಿನ್‌ ಎ ಹಾಗೂ 35.73 ಲಕ್ಷ ಮಕ್ಕಳಿಗೆ ವಿಟಮಿನ್‌ ಎ ಪೂರಕ ಔಷಧಿ ಹಾಗೂ ಮಾತ್ರೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೈಕೋರ್ಟ್‌ ತರಾಟೆ
ಅಪೌಷ್ಟಿಕತೆ ಹಿನ್ನೆಲೆಯಲ್ಲಿ ಸರಕಾರಕ್ಕೆ ರಾಜ್ಯ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಅದಕ್ಕೆ ಕೊರೊನಾ ಅಲೆಯ ಕಾರಣ ನೀಡಿತ್ತು. ವಿಚಾರಣೆ ವೇಳೆ ನಿಯಮಿತವಾಗಿ ಶಿಬಿರ ನಡೆಸುವಂತೆ ಸೂಚಿಸಿತ್ತು. ಅದರಂತೆ 2021ರ ಸೆಪ್ಟಂಬರ್‌ನಿಂದ ಆರೋಗ್ಯ ಇಲಾಖೆ ಆರೋಗ್ಯ ತಪಾಸಣ ಶಿಬಿರಗಳನ್ನು ಪ್ರಾರಂಭಿಸಿದೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next