ಲಂಡನ್: ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್‌ನಲ್ಲಿ ವಿರಾಟ್ ಕೊಹ್ಲಿ ಆಯೋ ಜಿಸಿದ ಸಹಾಯಾರ್ಥ ಭೋಜನ ಕೂಟಕ್ಕೆ ಆಗಮಿಸಿ ಟೀಮ್ ಇಂಡಿಯಾವನ್ನು ಮುಜು ಗರಕ್ಕೊಳಪಡಿಸಿದ ವಿದ್ಯಮಾನವಿದು…
ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಲಂಡನ್‌ನಲ್ಲಿ “ವಿರಾಟ್ ಕೊಹ್ಲಿ ಫೌಂಡೇಶನ್’ ವತಿಯಿಂದ ಸಹಾಯಾರ್ಥ ಔತಣ ಕೂಟವೊಂದು ಏರ್ಪಟ್ಟಿತ್ತು. ಮಾನವ ಕಳ್ಳ ಸಾಗಾಟದ ಬಲಿಪಶುಗಳಿಗೆ ನೆರವಾಗುತ್ತಿರುವ ಸರಕಾರೇತರ ಸಂಸ್ಥೆಯಾದ “ಜಸ್ಟೀಸ್ ಆ್ಯಂಡ್ ಕೇರ್’ಗೆ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕೂಟ ಇದಾಗಿತ್ತು.
ಖ್ಯಾತ ಕ್ರಿಕೆಟ್ ನಿರೂಪಕ ಅಲನ್ ವಿಲ್ಕಿನ್ಸ್ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಬಹುತೇಕ ಸದಸ್ಯರೆಲ್ಲ ಪಾಲ್ಗೊಂಡಿದ್ದರು. ಅಲ್ಲಿಗೆ ಆಹ್ವಾನವಿಲ್ಲದ ಅತಿಥಿಯೊಬ್ಬ ಬಂದಾಗ ಎಲ್ಲರಿಗೂ ಒಮ್ಮೆಲೇ ಶಾಕ್! ಜತೆಗೆ ಮುಜುಗರ, ಕಿರಿಕಿರಿಯೂ ಆಯಿತು. ಏಕೆಂದರೆ ಆ ಅತಿಥಿ ಬೇರೆ ಯಾರೂ ಅಲ್ಲ, ವಿಜಯ್ ಮಲ್ಯ ಆಗಿದ್ದರು! ಭಾರತ-ಪಾಕಿಸ್ಥಾನ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಮಲ್ಯ, ಕೊಹ್ಲಿ ಫೌಂಡೇಶನ್ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ.
ಆದರೆ ಭಾರತದ ಕ್ರಿಕೆಟಿಗರು ಮಲ್ಯರಿಂದ ಅಂತರವನ್ನು ಕಾಯ್ದುಕೊಂಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಟೀಮ್ ಇಂಡಿಯಾ ಸುಮ್ಮನೆ ವಿವಾದಕ್ಕೆ ಸಿಲುಕುವುದು ಬೇಡ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಿಗದಿತ ಅವಧಿಗೂ ಮೊದಲೇ ಮುಗಿಸಲಾಯಿತು.
ವಿಜಯ್ ಮಲ್ಯ ಆಗಮನದಿಂದ ಅನಗತ್ಯ ವಿವಾದ ಹುಟ್ಟಿಕೊಳ್ಳುವುದು ಬೇಡ ಎಂಬ ಕಾರಣಕ್ಕಾಗಿ ಬಿಸಿಸಿಐ ಸ್ಪಷ್ಟನೆಯನ್ನೂ ನೀಡಿದೆ. “ವಿರಾಟ್ ಕೊಹ್ಲಿ ಫೌಂಡೇಶನ್ ಈ ಕಾರ್ಯಕ್ರಮಕ್ಕೆ ವಿಜಯ್ ಮಲ್ಯ ಅವರನ್ನು ಆಹ್ವಾನಿಸಿರಲಿಲ್ಲ. ಯಾರೋ ಡಿನ್ನರ್ ಟೇಬಲ್ ಕಾದಿರಿಸಿ ತಮ್ಮ ಜತೆ ಮಲ್ಯ ಅವರನ್ನು ಕರೆತಂದಿದ್ದಾರೆ, ಅಷ್ಟೇ…’ ಎಂದಿದೆ. ಅಲ್ಲದೇ ಆಗ ಮಲ್ಯ ಅವರನ್ನು ಹೊರಹೋಗಿ ಎಂದು ಕೇಳಿಕೊಳ್ಳುವಂತೆಯೂ ಇರಲಿಲ್ಲ ಎಂದೂ ತಿಳಿಸಿದೆ.
ಟೀಮ್ ಇಂಡಿಯಾ ಸದಸ್ಯರು
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು. ಅವರು ಕೊಹ್ಲಿ ಜತೆ ವೇದಿಕೆಯನ್ನು ಹಂಚಿಕೊಂಡರು. ರೋಹಿತ್ ಶರ್ಮ ಮತ್ತು ಯುವರಾಜ್ ದಂಪತಿ ಸಮೇತ ಆಗಮಿಸಿದ್ದರು. ಶಿಖರ್ ಧವನ್ ತಮ್ಮ ಪತ್ನಿ ಹಾಗೂ ಮಗನ ಜತೆ ಬಂದಿದ್ದರು.