Advertisement

ಮಲ್ಲಿಪಾಡಿಯಲ್ಲಿದೆ ಸದಾಶಿವನ ಸನ್ನಿಧಿ

12:22 PM Jul 07, 2018 | |

ಬೆಳ್ತಂಗಡಿಯಿಂದ ಮೂಡಬಿದ್ರೆ ಮಾರ್ಗವಾಗಿ ಆರು ಕಿಲೋ ಮೀಟರ್‌ ಸಾಗಿದರೆ, ಬದ್ಯಾರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಗೆ ಸನಿಹದಲ್ಲಿ ಪುರಾತನವಾದ ಸದಾಶಿವ ದೇವರ ಸಾನಿಧ್ಯವಿರುವ, ಕಣ್ಸೆಳೆಯುವ ಹಸಿರಾದ ಪ್ರದೇಶದಲ್ಲಿ ಸುಂದರವಾದ ದೇವಾಲಯವಿದೆ. ಈ ಸ್ಥಳಕ್ಕೆ ಮಲ್ಲಿಪಾಡಿ ಎಂದು ಕರೆಯುತ್ತಾರೆ. 

Advertisement

ಐತಿಹ್ಯಗಳ ಪ್ರಕಾರ, ನೂರಾರು ವರ್ಷಗಳ ಹಿಂದೆ ದಲಿತ ಮಹಿಳೆಯೊಬ್ಬಳು ಕಟ್ಟಿಗೆ ತರಲು ಕಾಡಿಗೆ ಬಂದಿದ್ದಾಗ ಮರಗಳ ಕೆಳಗೆ ಉದ್ಭವಿಸಿದ ಶಿವಲಿಂಗವನ್ನು ನೋಡಿದಳು. ದೂರಲ್ಲಿದ್ದ ತನ್ನ ಮಗನಿಗೆ ಈ ಅಚ್ಚರಿಯ ನೋಟವನ್ನು ತೋರಿಸಲು ಅವನ “ಮಲ್ಲಿಯೋಡೀ’ ಎಂಬ ಹೆಸರು ಹಿಡಿದು ಕರೆದಳಂತೆ. ಹೀಗಾಗಿ ಶಿವಲಿಂಗವಿರುವ ಜಾಗಕ್ಕೆ ಮಲ್ಲಿಪಾಡಿ ಎನ್ನುವ ಹೆಸರು ಬಂತಂತೆ. ಮುಂದೆ ಇಲ್ಲಿ ದೇವಾಲಯ ನಿರ್ಮಾಣವಾಯಿತು. ಆಸುಪಾಸಿನ ಮೂರು ಗ್ರಾಮಗಳ ಭಕ್ತರು ಸದಾಶಿವನನ್ನು ಆರಾಧಿಸಿಕೊಂಡು ಬಂದರು.

    ಆದರೆ ಕಾಲವಶದಿಂದ ದೇವಾಲಯವು ಕುಸಿದುಹೋಗಿ ಇಲ್ಲಿ ಪೂಜಾದಿಗಳು ನಿಂತುಹೋಗಿದ್ದವು. ಲಿಂಗವು ಬಹುಕಾಲ ಕಾಡುಕಂಟಿಗಳಿಂದ ಮುಚ್ಚಿಹೋಗಿತ್ತು. ಇದರಿಂದ ಮೂರು ಗ್ರಾಮಗಳನ್ನು ûಾಮ, ರೋಗ ರುಜಿನಗಳು ಬಾಧಿಸಿದವು. ಈ ತೊಂದರೆಯಿಂದ ಕಂಗಾಲಾದ ಜನರು, ಪರಿಹಾರ ತಿಳಿಯಲು ಬಳಿಕ ನಡೆಸಿದ ಅಷ್ಟಮಂಗಲ ಪ್ರಶ್ನೆಯಿಂದ ಆ ಪ್ರದೇಶದಲ್ಲಿ ಶಿವಲಿಂಗವಿರುವ ವಿಷಯ ತಿಳಿಯಿತು. ಶಿವನಿಗೆ ಗುಡಿ ಕಟ್ಟಿಸಿ ಪೂಜಾದಿಗಳನ್ನು ಮಾಡುವ ತನಕ ಯಾರಿಗೂ ಕ್ಷೇಮವಿಲ್ಲ ಎಂಬ ಅಂಶವೂ ಆಗಲೇ ವ್ಯಕ್ತವಾಯಿತು. ಕಳೆದ ವರ್ಷ ಭಕ್ತಾದಿಗಳ ಪ್ರಯತ್ನದಿಂದ ನೂತನ ದೇವಾಲಯ ನಿರ್ಮಾಣವಾಗಿ ಪ್ರತಿಷ್ಠಾಧಿಗಳು ಸಂಪನ್ನವಾಗಿವೆ. ಬೆಳಗ್ಗೆ ವ್ಯವಸ್ಥಿತವಾಗಿ ಪೂಜೆ ನಡೆಯುತ್ತಿದೆ. 

    ಈ ಕ್ಷೇತ್ರದಲ್ಲಿ ವಿಶೇಷ ಏನೆಂದರೆ, ಸಂಬಂಧ ಕೂಡಿ ಬರದೆ ಮದುವೆಯಾಗಿಲ್ಲವೆಂಬ ನಿರಾಶೆಗೊಳಗಾದವರು ಇಲ್ಲಿ ಬಂದು ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತುಕೊಂಡರೆ ನಿರ್ವಿಘ್ನವಾಗಿ ವಿವಾಹ ನೆರವೇರುತ್ತದೆಂಬ ನಂಬಿಕೆ ಇದೆ. ಗ್ರಹದೋಷವಿರುವವರು ಎಳ್ಳೆಣ್ಣೆಯನ್ನು ಒಪ್ಪಿಸುವ ಹರಕೆ ಹೇಳಿಕೊಂಡು ಕಂಟಕಗಳನ್ನು ನಿವಾರಿಸಿಕೊಳ್ಳಬಹುದೆಂಬ ದೇವರ ಮಹಿಮೆಗೂ ಹಲವು ಸಾಕ್ಷ್ಯಗಳು ಲಭಿಸಿವೆ. ಹಸುಗಳು ಗರ್ಭ ಧರಿಸದಿದ್ದರೆ ಈ ದೇವಾಲಯಕ್ಕೆ ಕರು ಒಪ್ಪಿಸುವ ಹರಕೆ ಹೊತ್ತುಕೊಂಡು ಲಾಭ ಪಡೆದ ಪ್ರಸಂಗಗಳೂ ಇವೆ. ಮಕ್ಕಳಿಲ್ಲದವರಿಗೂ ಶಿವನ ಕರುಣೆಯಿಂದ ಮನೆಯಲ್ಲಿ ತೊಟ್ಟಿಲು ತೂಗುವಂತಾಗಿದೆ. ದೇವಾಲಯದ ಒಳಗೆ ಶಿವ ಸನ್ನಿಧಿಯಲ್ಲದೆ ಪಾರ್ವತಿ ಮತ್ತು ಗಣಪತಿ ಸನ್ನಿಧಾನಗಳೂ ಇವೆ. ಸ್ಥಳದಲ್ಲಿರುವ ಶಿವನ ಬಂಟರಾದ ದೈವಗಳಿಗೂ ನೆಲೆಗಳನ್ನು ನಿರ್ಮಿಸಲಾಗಿದೆ.

Advertisement

    ಫೆಬ್ರವರಿ ತಿಂಗಳಲ್ಲಿ ಇಲ್ಲಿ ದೇವರ ಜಾತ್ರೆ ನಡೆಯುವಾಗ ಮೂರು ಗ್ರಾಮಗಳ ಪ್ರತಿ ಮನೆಯಿಂದಲೂ ಅಲ್ಲದೇ, ಪರವೂರುಗಳಿಂದಲೂ ಭಕ್ತರ ಸಂದಣಿ ಸೇರುತ್ತದೆ. ರಾತ್ರಿ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ನಯನ ಮನೋಹರವಾದ ಬಲಿ ಉತ್ಸವ ನಡೆಯುತ್ತದೆ. ಇದು ನೋಡಲೇಬೇಕಾದ ಕಾರ್ಯಕ್ರಮ. ಬಳಿಕ ದೈವಗಳಿಗೆ ವಿಜೃಂಭಣೆಯ ಕೋಲವೂ ಬೆಳಗಿನವರೆಗೆ ಜರಗುತ್ತದೆ. ಈ ಕಾರ್ಯಕ್ರಮಗಳಿಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಮಹಾ ಶಿವರಾತ್ರಿಯ ದಿನ ದೇವಾಲಯದಲ್ಲಿ ಭಜನೆಯ ಕಾರ್ಯಕ್ರಮವೂ ಏರ್ಪಾಟಾಗುತ್ತದೆ.

ಪ. ರಾಮಕೃಷ್ಣ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next