ಬೆಂಗಳೂರು: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿಯವರ ಈ ಕೆಲಸ ಜನರಿಗೆ ತೊಂದರೆ ಕೊಡುವಂತಹದ್ದು ಎಂದಿದ್ದಾರೆ.
ನೂತನ ಸಿಎಂ, ಡಿಸಿಎಂ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಈಗ ಮತ್ತೂಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್‌ಗೆ ತೆರಳಿದಾಗಲೆಲ್ಲ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್‌ಗೆ ಹೋಗಿದ್ದಾಗ ಒಂದು ಸಾವಿರ ರೂಪಾಯಿ ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸದಿಂದ ದೇಶದ ಜನರಿಗೆ ತೊಂದರೆ ಆಗುತ್ತಿದೆ ಎಂದರು.
ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ವಾಗ್ಧಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರ ಭರವಸೆಗಳನ್ನು ಜಾರಿ ಮಾಡುತ್ತೇವೆ. ಕಳೆದ ಬಾರಿಯ ಸರಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೂಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ ಎಂದರು.
ನಮ್ಮದು ರಾಜ್ಯದಲ್ಲಿ ದ್ವೇಷವನ್ನು ಕಿತ್ತೂಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ ಎಂದು ಇದೇ ವೇಳೆ ಖರ್ಗೆ ಹೇಳಿದರು.