ಗುರುಮಠಕಲ್: ಇಲ್ಲಿಂದ ತಮ್ಮ ರಾಜಕೀಯ ಆರಂಭಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಇನ್ನು ಕಣಕ್ಕಿಳಿದು ಅಬ್ಬರಿ ಸಿರುವ ಬಾಬುರಾವ್ ಚಿಂಚನಸೂರು ಕೂಡ ಸಪ್ತ ಖಾತೆ ಸಚಿವರಾಗಿ ಗಮನ ಸೆಳೆದಿದ್ದರು. ಅಂತಹ ಕ್ಷೇತ್ರದ 2023ರ ಚುನಾವಣೆ ತ್ರಿಕೋನ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದೆ. ಅಲ್ಲದೆ ಒಂದೆಡೆ ಪತಿಗಾದ ಗಾಯದ ಅನುಕಂಪ, ಇನ್ನೊಂದೆಡೆ ಹೊಸ ಮುಖದ ಅದೃಷ್ಟ ಮತ್ತು ಯುವಕ ನಾಯಕತ್ವ ಅಗ್ನಿ ಪರೀಕ್ಷೆಯಲ್ಲಿದೆ.
ಕ್ಷೇತ್ರದಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಇದರಿಂದಾಗಿಯೇ ಎಲ್ಲ ಪಕ್ಷಗಳು ಕೋಲಿ ಸಮಾಜದ ಮುಖಂಡರಿಗೆ ಮಣೆ ಹಾಕುವುದು ವಾಡಿಕೆ. ಮಾಜಿ ಸಚಿವ ಹಾಲಿ ಕಣದಲ್ಲಿರುವ ಅಭ್ಯರ್ಥಿ ಬಾಬುರಾವ್ ಚಿಂಚನಸೂರು 2 ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ 2018ರಲ್ಲಿ ಬಿಜೆಪಿಗೆ ಜಿಗಿದು ಸೋಲುಂಡಿದ್ದರು. ಆದರೆ ಬದಲಾದ ರಾಜಕಾರಣದಲ್ಲಿ ಪುನಃ ಈ ಬಾರಿ ಚಿಂಚನಸೂರು ಕಾಂಗ್ರೆಸ್ ಅಭ್ಯರ್ಥಿ. ಪ್ರಚಾರ ಸಮಯದಲ್ಲಿ ಉಂಟಾದ ಅಪಘಾತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಲಿಗೆ ಪೆಟ್ಟು ತಿಂದು ದೊಡ್ಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜೀವಾಪಾಯದಿಂದ ಪಾರಾಗಿದ್ದಾರೆ. ಅವರ ಪತ್ನಿ ಅಮರೇಶ್ವರಿ ಚಿಂಚನಸೂರು ಕಾಲಿಗೆ ಚಕ್ರ ಕಟ್ಟಿಕೊಂಡು ಛಲ ಹೊತ್ತ ಮಹಿಳೆಯಾಗಿ ಪತಿಯನ್ನು ಗೆಲ್ಲಿಸಿ ಎಂದು ಸೆರಗೊಡ್ಡಿ ಪ್ರಚಾರ ಮಾಡುತ್ತಿದ್ದಾರೆ.
ಇನ್ನು ಹಾಲಿ ಶಾಸಕ ನಾಗನಗೌಡ ಕಂದಕೂರು 2018ರಲ್ಲಿ ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಿ ಅಖಾಡದಲ್ಲಿ ಗೆದ್ದು ಬೀಗಿದ್ದರು. ಇವರು ಕೂಡ ಇಡೀ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಕರ ದಂಡು ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಕುಮಾರಸ್ವಾಮಿ ಸಿಎಂ ಇದ್ದಾಗ ಮಾಡಿದ್ದ ಕಾರ್ಯ ಗಳು, ಈಗ ಘೋಷಣೆ ಮಾಡಿರುವ ಪ್ರಣಾಳಿಕೆ ಘೋಷಣೆಗಳನ್ನೇ ಗುರಾಣಿ ಮಾಡಿಕೊಂಡು ಸಂಚಲನ ಉಂಟು ಮಾಡಿದ್ದಾರೆ. ಅದಲ್ಲದೆ ಯುವಕರತ್ತ ಮತದಾರರು ಭರವಸೆಯಿಡುವಂತೆ ಕೆಲಸವೂ ಮಾಡಿ ತೋರಿಸುವ ಪಣವನ್ನು ತೊಟ್ಟಿದ್ದಾರೆ.
ಹೊಸ ಮುಖ ಹೊಸ ಸವಾಲು: ಕೋಲಿ ಸಮಾಜದವರೇ ಆಗಿರುವ ಬಿಜೆಪಿಯ ಹೊಸ ಅನ್ವೇಷಣೆ ಲಲಿತಾ ಅನಪೂರ. ಬಿಜೆಪಿಯಲ್ಲಿ ಕೊಟ್ಟ ಕೆಲಸ ವನ್ನು ನಿಷ್ಠೆಯಿಂದ ಮಾಡಿ ಮಹಿಳಾ ಪಡೆ ಬಲಗೊಳಿಸುವಲ್ಲಿ ಶ್ರಮಿಸಿದವರು. ಇವರಿಗೆ ಟಿಕೆಟ್ ನೀಡಿದ್ದು ರಾಜ್ಯದಲ್ಲಿಯೇ ಅಚ್ಚರಿ ಮೂಡಿಸಿತ್ತು. ಹಿಂದುಳಿದ ವರ್ಗದ ಕೋಟಾ ಕಾಪಾಡಲು ಈ ಆಯ್ಕೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಯಾದಗಿರಿ ನಗರಸಭೆ ಅಧ್ಯಕ್ಷರಾಗಿ ತಮ್ಮ ಆಡಳಿತ ವೈಖರಿ ಪರಿಚ ಯಿಸಿದ್ದಾರೆ. ಇವರ ಓಡಾಟ, ಜನರ ಒಡನಾಟ ಇದ್ದರೂ ನಾಡಿಮಿಡಿತ ಅರಿವುದು ದೊಡ್ಡ ಸವಾಲಾಗಿದೆ. ಟಿಕೆಟ್ ಆಕಾಂಕ್ಷಿ ನಾಗರತ್ನ ಕುಪ್ಪಿ ಪ್ರಚಾರದಿಂದ ದೂರ ಉಳಿದಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ಕಾಣಿಸುತ್ತಿದ್ದು ಯಾರಿಗೆ ಗೆಲುವು ಎಂಬುದು ಕೂತುಹಲಕ್ಕೆಡೆ ಮಾಡಿದೆ.
-ಚನ್ನಕೇಶವಲು ಗೌಡ