ನವದೆಹಲಿ: ನಿನ್ನೆಯಷ್ಟೇ ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಮೈತ್ರಿಕೂಟ ಪ್ರಧಾನಿ ಆಯ್ಕೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಘೋಷಿಸಿದ್ದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನಡೆದ ಸಭೆಯಲ್ಲಿ ಉಲ್ಟಾ ಹೊಡೆದಿದ್ದಾರೆ.
ಇಂದು ನಡೆದ ಮಹತ್ವದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ಧಾರೆ. ದಲಿತ ಸಮುದಾಯದ ಪ್ರಮುಖ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಈ ಪ್ರಸ್ತಾಪವನ್ನು ಇತರರೂ ಒಪ್ಪಿಕೊಂಡಿದ್ಧಾರೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಭಾಗವಹಿಸಿದ್ದ 12 ಪಕ್ಷಗಳೂ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತ ಈ ಪ್ರಸ್ತಾಪವನ್ನು ಒಪ್ಪಿಕೊಂಡಿವೆ. ಹೆಚ್ಚಾಗಿ ಕಾಂಗ್ರೆಸ್ ಕುರಿತ ವಿಚಾರಗಳಿಗೆ ಅಷ್ಟಾಗಿ ಸಮ್ಮತಿ ಸೂಚಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಈ ಉಪಾಯವನ್ನು ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಲಿತ ಮುಖವನ್ನು ಮುಂಚೂಣಿಯಲ್ಲಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಯೋಜನೆಯನ್ನು ಮೈತ್ರಿಕೂಟ ಹಾಕಿಕೊಂಡಂತಿದೆ.
ಇಷ್ಟೆಲ್ಲಾ ಚರ್ಚೆಗಳ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಯೋಜನೆಯನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಪ್ರಧಾನಿಯಾಗುವ ಯಾವುದೇ ಉದ್ದೇಶ ತನಗಿಲ್ಲ. ತಾನು ದೀನದಲಿತರಿಗಾಗಿ ಮಾತ್ರ ಕೆಲಸ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿರುವುದಾಗಿ ತಿಳಿದುಬಂದಿದೆ.
ಮೈತ್ರಿಕೂಟದ ಈ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ, ಮೈತ್ರಿಕೂಟದ ಸದಸ್ಯ ಪಕ್ಷಗಳು ರಾಷ್ಟ್ರಪತಿ ಚುನಾವಣೆಯ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಾದ ರಾಮನಾಥ್ ಕೋವಿಂದ್ ಮತ್ತು ದ್ರೌಪದಿ ಮುರ್ಮು ಅವರ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು . ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ದಲಿತರು ಮತ್ತು ಆದಿವಾಸಿಗಳ ವಿರೋಧಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಜಾತಿಗಣತಿ ವಿಚಾರದಲ್ಲಿ ಬೇಸರವಿದ್ದರೆ ರಾಜೀನಾಮೆ ಕೊಟ್ಟು ಹೊರಬರಲಿ: ಈಶ್ವರಪ್ಪ