Advertisement

ಖರ್ಗೆ ವರ್ಸಸ್‌ ತರೂರ್‌; ಕಾಂಗ್ರೆಸ್‌ಗೆ ದಕ್ಷಿಣದ ಸರದಾರ

11:07 PM Oct 05, 2022 | Team Udayavani |

ಹಲವಾರು ಅಡೆತಡೆಗಳ ಮಧ್ಯೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಯಾರ್ಯಾರೋ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳ ನಡುವೆ, ಅಂತಿಮವಾಗಿ ಕೇರಳದ ಸಂಸದ ಶಶಿ ತರೂರ್‌, ಕರ್ನಾಟಕದ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಣದಲ್ಲಿ ಉಳಿದಿದ್ದಾರೆ.

Advertisement

ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬದ ಕ್ಯಾಂಡಿಡೇಟ್‌ ಆಗಿ ಬಿಂಬಿತವಾಗಿದ್ದರೆ, ತರೂರ್‌ ಭಿನ್ನಮತೀಯ ಅಭ್ಯರ್ಥಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಆದರೆ, ಈ ಬಾರಿಯ ವಿಶೇಷವೆಂದರೆ, ಯಾರೇ ಗೆದ್ದರೂ ಅವರು ದಕ್ಷಿಣ ಭಾರತೀಯರಾಗಿರುತ್ತಾರೆ. ಇದಕ್ಕಿಂತ ಮಿಗಿಲಾಗಿ ಹಿಂದಿಯೇತರ ರಾಜ್ಯದ ನಾಯಕರೊಬ್ಬರು ಈ ಹುದ್ದೆಗೆ ಏರಲಿದ್ದಾರೆ.

ಈ ಬಾರಿಯ ಎಐಸಿಸಿ ಗಾದಿ ಚುನಾವಣೆ ಬೇಕಿಲ್ಲದ ಕಾರಣಗಳಿಂದಾಗಿ ಹೆಚ್ಚು ಚರ್ಚೆಯಲ್ಲಿದೆ. ಕಳೆದ ಎರಡೂವರೆ ದಶಕಗಳಿಂದಲೂ ಗಾಂಧಿ ಕುಟುಂಬದವರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯವರ ನಡುವೆಯೇ ಎಐಸಿಸಿ ಪಟ್ಟ ಕೈ ಬದಲಾಗಿದ್ದರಿಂದ ಅಷ್ಟೇನೂ ಸುದ್ದಿಯಾಗಿರಲಿಲ್ಲ. ಈ ಬಾರಿ ಮಾತ್ರ ಪಕ್ಷದ ನಾಯಕರೇ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಧ್ವನಿ ಎತ್ತಿದ್ದರಿಂದ ಅನಿವಾರ್ಯವಾಗಿ ಚುನಾವಣೆ ನಡೆಸಲೇಬೇಕಾದ ಸ್ಥಿತಿ ಉದ್ಭವವಾಗಿದೆ. ಹಾಗೆಯೇ, ಎಲ್ಲೋ ಒಂದು ಕಡೆ ಗಾಂಧಿ ಕುಟುಂಬದ ಪ್ರಭಾವಳಿಯಿಂದ ಹೊರಬರುವ ಪ್ರಯತ್ನವೂ ಕಾಂಗ್ರೆಸ್‌ನಲ್ಲಿ ಶುರುವಾಗಿದೆ.

ಕಾಂಗ್ರೆಸ್‌ನ ಭವಿಷ್ಯದ ದೃಷ್ಟಿಯಿಂದ ಈಗಿನ ಎಐಸಿಸಿ ಚುನಾವಣೆ ಮಹತ್ವ ಪಡೆದುಕೊಂಡಿದೆ. ಪ್ರಮುಖವಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂಬ ಬಿಜೆಪಿಯ ಟೀಕೆಗೆ ಸಮರ್ಥವಾಗಿ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನವೂ ಇದಾಗಿದೆ. ಹೀಗಾಗಿಯೇ, ಈ ಚುನಾವಣಾ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಗಾಂಧಿ ಕುಟುಂಬ ಹೊರಗುಳಿದಿದೆ. ಇದು ಹೀಗೆಯೇ ಇರಲಿ ಎಂಬುದು ಕಾಂಗ್ರೆಸ್‌ನ ಬಹುತೇಕ ಮಂದಿಯ ಆಶಯವೂ ಆಗಿದೆ.

ಈ ಎಲ್ಲ ಸಂಗತಿಗಳ ನಡುವೆ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ಅವರ ಬಗ್ಗೆ ನೋಡುವುದಾದರೆ, ವಿಶೇಷ ಸಂಗತಿಯೊಂದು ಗೋಚರಿಸುತ್ತದೆ.

Advertisement

ರಾಷ್ಟ್ರಮಟ್ಟದಲ್ಲಿ ಇಂದಿಗೂ ಪ್ರಮುಖ ಹುದ್ದೆಗಳು ಪಾಲಾಗುವುದು ಉತ್ತರ ಭಾರತಕ್ಕೇ. ಪ್ರಧಾನಿ ಹುದ್ದೆಯಿಂದ ಹಿಡಿದು, ರಾಷ್ಟ್ರಪತಿ ಹುದ್ದೆವರೆಗೆ. ಹಾಗೆಯೇ, ಪಕ್ಷದಲ್ಲಿನ ಅಧ್ಯಕ್ಷ ಸ್ಥಾನಗಳೂ ಅಲ್ಲಿನವರ ಪಾಲಾಗುತ್ತವೆ. ಇದಕ್ಕೆ ಉತ್ತರ ಭಾರತದಲ್ಲಿ ಹೆಚ್ಚೇ ಇರುವ ಲೋಕಸಭಾ ಕ್ಷೇತ್ರಗಳು ಮತ್ತು ದೊಡ್ಡ ರಾಜ್ಯಗಳು.

ಅದರಲ್ಲೂ ಕೇಂದ್ರಾಡಳಿತ ಪ್ರದೇಶಗಳು ಸೇರಿ 11 ರಾಜ್ಯಗಳಲ್ಲಿ ಹಿಂದಿ ಭಾಷಿಕರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿಂದಿ ಭಾಷಿಕರಿಗೆ ನಿರಾಯಾಸವಾಗಿ ಪ್ರಮುಖ ಹುದ್ದೆಗಳು ಸಿಗುತ್ತವೆ. ಅಲ್ಲದೆ, ಹಿಂದಿ ರಾಜ್ಯಗಳು ಸೇರಿ, ಹಿಂದಿ ಭಾಷಿಕರ ಸಂಖ್ಯೆಯೇ 42 ಕೋಟಿ ಇದೆ. ಹೀಗಾಗಿ, ಈ ಮತದಾರರನ್ನು ಸೆಳೆಯಲು ಹಿಂದಿ ಹಾರ್ಟ್‌ಲ್ಯಾಂಡ್‌ನ‌ ನಾಯಕರನ್ನೇ ಪ್ರಮುಖ ಸ್ಥಾನಗಳಿಗೆ ಪಕ್ಷಗಳು ಆರಿಸುತ್ತವೆ ಎಂಬುದರಲ್ಲಿ ಬೇರೆ ಮಾತಿಲ್ಲ.

ಈ ಬಾರಿ ವಿಶೇಷವೆಂಬಂತೆ, ಕಾಂಗ್ರೆಸ್‌ನ ಎಐಸಿಸಿ ಅಖಾಡದಲ್ಲಿ ದಕ್ಷಿಣ ಭಾರತೀಯರೇ ಇಬ್ಬರಿದ್ದಾರೆ. ಅದರಲ್ಲೂ ನೆರೆ ಹೊರೆಯ ರಾಜ್ಯವಾಗಿರುವ ಕರ್ನಾಟಕ ಮತ್ತು ಕೇರಳದ ಇಬ್ಬರು ನಾಯಕರು ಕಣದಲ್ಲಿದ್ದಾರೆ. ಮೊದಲನೆಯವರು, ಇಂದಿಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ, ಕಾಂಗ್ರೆಸ್‌ನ ಅತ್ಯಂತ ನಂಬಿಕಸ್ಥ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಮತ್ತೂಬ್ಬರು, ರಾಜತಾಂತ್ರಿಕತೆಯ ಹುದ್ದೆಯಿಂದ ರಾಜಕಾರಣಿಯಾಗಿ ಬದಲಾಗಿರುವ ಕೇರಳದ ಶಶಿ ತರೂರ್‌.

ಓಲ್ಡ್‌ ಗಾರ್ಡ್‌ ವರ್ಸಸ್‌ ನ್ಯೂ ಬ್ಲಿಡ್‌
ಇದು ಇವರಿಬ್ಬರ ಕ್ಯಾಂಡಿಡೇಚರ್‌ ಬಗ್ಗೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು. ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವದಲ್ಲಿ ಬದಲಾಗಬೇಕು ಎಂಬುವವರ ಸಾಲಿನಲ್ಲಿ ಅಗ್ರವಾಗಿ ನಿಲ್ಲುವವರು ಶಶಿತರೂರ್‌. ಸದ್ಯ 65 ವರ್ಷ ಪೂರೈಸಿರುವ ತರೂರ್‌, ಕಾಂಗ್ರೆಸ್‌ನ ಆಂತರಿಕ ಮಟ್ಟದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂಬ ಕನಸು ಇರಿಸಿಕೊಂಡಿದ್ದಾರೆ. ಹೀಗಾಗಿಯೇ ಇವರನ್ನು ನ್ಯೂ ಬ್ಲಿಡ್‌ ನಾಯಕ ಎಂದೇ ಗುರುತಿಸಲಾಗುತ್ತಿದೆ.

ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್‌ನ ಓಲ್ಡ್‌ ಗಾರ್ಡ್‌ ನಾಯಕ. ಶಶಿತರೂರ್‌ ಅವರ ಪ್ರಕಾರವೇ, ಖರ್ಗೆ ಅವರಿಂದ ಕಾಂಗ್ರೆಸ್‌ನಲ್ಲಿ ಹೊಸ ಬದಲಾವಣೆ ನಿರೀಕ್ಷೆ ಮಾಡಲಾಗದು. ಏಕೆಂದರೆ, 80 ವರ್ಷದ ಖರ್ಗೆ ಅವರು, ಹೊಸದಾಗಿ ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾರರು ಎಂಬ ಉದಾಹರಣೆಯನ್ನು ನೀಡಲಾಗುತ್ತಿದೆ. ಇದಕ್ಕಿಂತ ಪ್ರಮುಖವಾಗಿ ಗಾಂಧಿ ಕುಟುಂಬದ ನೆರಳಿನಲ್ಲಿಯೇ ಇವರು ಕೆಲಸ ಮಾಡುವುದರಿಂದ ಬದಲಾವಣೆ ಕಷ್ಟ ಎಂಬ ಮಾತುಗಳಿವೆ.

ಖರ್ಗೆ ಫೇವರಿಟ್‌
ಸದ್ಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಕೆಲವೇ ದಿನಗಳಲ್ಲಿ ನಾಮಪತ್ರ ವಾಪಸಾತಿ ಪ್ರಕ್ರಿಯೆಯೂ ಮುಗಿಯುತ್ತದೆ. ಈಗಿನ ಮೂಲಗಳ ಪ್ರಕಾರ, ಶಶಿತರೂರ್‌ ಅವರು ನಾಮಪತ್ರ ವಾಪಸ್‌ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ, ಅ.17ರ ಚುನಾವಣೆ ನಡೆಯುವುದು ಶತಸಿದ್ಧವೇ ಆಗಿದೆ.

ಆದರೆ, ಈಗಿನ ಟ್ರೆಂಡ್‌ ನೋಡಿದರೆ, ಮಲ್ಲಿಕಾರ್ಜುನ ಖರ್ಗೆ ಅವರೇ ಗೆಲ್ಲುವ ಫೇವರಿಟ್‌ ಎನ್ನಿಸಿದ್ದಾರೆ. ಗಾಂಧಿ ಕುಟುಂಬ ನೇರವಾಗಿ ಎಲ್ಲಿಯೂ ಗುರುತಿಸಿಕೊಳ್ಳದಿದ್ದರೂ, ಅವರ ಫೇವರಿಟ್‌ ಅಭ್ಯರ್ಥಿ ಖರ್ಗೆಯೇ ಆಗಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ಆಂತರಿಕ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿದ್ದ ಜಿ 23 ಗುಂಪಿನ ನಾಯಕರೂ ಖರ್ಗೆ ಅವರ ಬೆನ್ನಿಗೆ ನಿಂತಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ, ತರೂರ್‌ ಈಗ ಒಬ್ಬಂಟಿಯಾಗಿದ್ದಾರೆ.

ಇನ್ನು ಖರ್ಗೆ ಅವರ ಗೆಲುವು ನಾಮಪತ್ರ ಸಲ್ಲಿಕೆ ದಿನವೇ ಸಾಬೀತಾಗಿದೆ ಎಂಬ ವಿಶ್ಲೇಷಣೆಯೂ ನಡೆದಿದೆ. ನಾಮಪತ್ರ ಸಲ್ಲಿಕೆಯ ಕಡೇ ದಿನದವರೆಗೂ ಖರ್ಗೆ ಅವರ ಅಭ್ಯರ್ಥಿತನದ ಬಗ್ಗೆ ಸಸ್ಪೆನ್ಸ್‌ಗಳಿದ್ದವು. ಯಾವಾಗ ರಾಜಸ್ಥಾನದಲ್ಲಿ ರಾಜಕೀಯವೇ ಅಲ್ಲೋಲಕಲ್ಲೋಲವಾಗಿ ಅಶೋಕ್‌ ಗೆಹೊÉàಟ್‌ ಅವರು ರಾಜಸ್ಥಾನ ಬಿಟ್ಟು ಬರಲ್ಲ ಎಂಬುದು ಖಚಿತವಾಯಿತೋ, ಆಗಿನಿಂದ ಖರ್ಗೆ ಅವರೇ ಗಾಂಧಿ ಕುಟುಂಬದ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಂಡರು.

ಖರ್ಗೆ ಯಾಕೆ ಫೇವರಿಟ್‌?
1. 11 ಚುನಾವಣೆಗಳನ್ನು ಸತತವಾಗಿ ಗೆದ್ದಿರುವ ಉತ್ತಮ ಟ್ರ್ಯಾಕ್‌ ರೆಕಾರ್ಡ್‌
2. ಈ ಗೆಲುವುಗಳಲ್ಲಿ 9 ವಿಧಾನಸಭೆ ಮತ್ತು 2 ಲೋಕಸಭಾ ಚುನಾವಣೆಗಳಿವೆ.
3. ಗಾಂಧಿ ಕುಟುಂಬದ ಅತ್ಯಂತ ನಿಷ್ಠಾವಂತ ನಾಯಕ
4. ಪಕ್ಷದೊಳಗೂ ಉತ್ತಮ ಗೌರವ ಇರಿಸಿಕೊಂಡಿರುವ ವ್ಯಕ್ತಿ
5. ದಲಿತ ನಾಯಕರಾಗಿರುವ ಇವರಿಗೆ ಉನ್ನತ ಸ್ಥಾನ ನೀಡಿ ಸಮಾಜಕ್ಕೆ ಬೇರೊಂದು ಸಂದೇಶ ರವಾನಿಸುವ ಯತ್ನ
6. ಸಂಘಟನೆಯಿಂದ ಬಂದಿರುವ ನಾಯಕ
7. ಕಾಂಗ್ರೆಸ್‌ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ಅನುಭವಿ ನಾಯಕ
8. ಹಿಂದಿ, ಇಂಗ್ಲಿಷ್‌, ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳ ಮೇಲೆ ಹಿಡಿತ
9. ಹಿಂದಿ ಹಾರ್ಟ್‌ಲ್ಯಾಂಡ್‌ನ‌ಲ್ಲೂ ಖರ್ಗೆ ಅವರಿಗೆ ಮನ್ನಣೆ ಸಿಗುವ ಸಾಧ್ಯತೆ
10. ಇಲ್ಲಿವರೆಗೆ ಕಾಯ್ದುಕೊಂಡು ಬಂದಿರುವ ಕ್ಲೀನ್‌ ಇಮೇಜ್‌ ನಾಯಕತ್ವ
11. ಪ್ರತಿಪಕ್ಷಗಳ ನಾಯಕರ ಜತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವ ನಾಯಕ

ಕಾಂಗ್ರೆಸ್‌ ಪುನರುಜ್ಜೀವನಗೊಳಿಸಿಯಾರೇ?
ಸದ್ಯ ಕಾಂಗ್ರೆಸ್‌ ಸಂಕಷ್ಟಕರ ಸನ್ನಿವೇಶದಲ್ಲಿದೆ. ರಾಜಸ್ಥಾನದ ಘಟನೆ ನಂತರ, ರಾಜ್ಯ ಘಟಕಗಳು ಹೈಕಮಾಂಡ್‌ ಮಾತನ್ನು ಮೀರುವ ಹಂತಕ್ಕೆ ಬೆಳೆದಿವೆ ಎಂಬುದು ಸ್ವತಃ ಖರ್ಗೆ ಅವರಿಗೇ ಸಾಬೀತಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ದೇಶದ ಕಾಂಗ್ರೆಸ್‌ ಕಾರ್ಯಕರ್ತರನ್ನು ಮತ್ತೆ ಒಗ್ಗೂಡಿಸಬೇಕಾಗಿದೆ. ದೇಶಾದ್ಯಂತ ಖರ್ಗೆ ಅವರಿಗೆ ಓಡಾಟ ನಡೆಸಲು ಸಾಧ್ಯವಾಗದೇ ಹೋದರೂ, ಜತೆಯಲ್ಲಿ ಒಂದು ದೊಡ್ಡ ಪಡೆಯನ್ನೇ ಕಟ್ಟಿಕೊಂಡು ಕೆಲಸ ಮಾಡಬಹುದು. ಅಷ್ಟೇ ಅಲ್ಲ, ರಾಹುಲ್‌ ಗಾಂಧಿಯವರ ಬೆನ್ನಿಗೆ ನಿಂತು ಕೆಲಸ ಮಾಡಿ, ಅವರಿಗೆ ಶಕ್ತಿ ತುಂಬಬಹುದು.

ಹಾಗೆಯೇ, ಈ ವರ್ಷಾಂತ್ಯ ಮತ್ತು ಮುಂದಿನ ವರ್ಷ ದೇಶದ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಗಳಿವೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವ ಸವಾಲು ಖರ್ಗೆ ಅವರ ಮುಂದಿದೆ. ಜತೆಗೆ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳನ್ನು ಒಗ್ಗೂಡಿಸುವ ಸಾಮರ್ಥ್ಯವೂ ಖರ್ಗೆ ಅವರಲ್ಲಿ ಇದೆ. ದಲಿತ ನಾಯಕರೊಬ್ಬರಿಗೆ ಉನ್ನತ ಪಟ್ಟ ಸಿಗುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಅವಕಾಶ ಸಿಗಬಹುದು.

ಇದೆಲ್ಲದಕ್ಕಿಂತ ಪ್ರಮುಖವಾಗಿ ಖರ್ಗೆ ಅವರ ಮುಂದಿರುವ ದೊಡ್ಡ ಸವಾಲು, ಗಾಂಧಿ ಕುಟುಂಬದ ಹೊರತಾಗಿ, ಇಡೀ ದೇಶದಲ್ಲಿರುವ ಎಲ್ಲಾ ಕಾಂಗ್ರೆಸ್‌ ಘಟಕಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವರೇ ಎಂಬುದು. ಈಗಾಗಲೇ, ಬಹಳಷ್ಟು ರಾಜ್ಯಗಳು, ಹಿಡಿತ ತಪ್ಪಿರುವಂತೆ ಕಾಣಿಸುತ್ತಿದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಪಕ್ಷ ಗಟ್ಟಿಯಾಗದು. ಈ ನಿಟ್ಟಿನಲ್ಲಿ ಖರ್ಗೆ ಅವರ ನಿರ್ಧಾರಗಳು ಹೇಗಿರುತ್ತವೆ ಎಂಬುದು ಪ್ರಮುಖವಾಗುತ್ತದೆ.

-ಸಿ.ಜೆ. ಸೋಮಶೇಖರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next