Advertisement

ಈಗ ಎಐಸಿಸಿ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್‌, ದಿಗ್ವಿಜಯ್‌?

11:55 PM Sep 26, 2022 | Team Udayavani |

ಹೊಸದಿಲ್ಲಿ/ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡು, ಕಾಂಗ್ರೆಸ್‌ನ ಒಳಜಗಳ ತಾರಕಕ್ಕೇರಿರುವಂತೆಯೇ ಸಿಎಂ ಅಶೋಕ್‌ ಗೆಹ್ಲೋಟ್ ವಿರುದ್ಧ ಗಾಂಧಿ ಕುಟುಂಬ ತೀವ್ರ ಅಸಮಾಧಾನಗೊಂಡಿದೆ
ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಹೀಗಾಗಿ, ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಔಟ್‌ ಆಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್‌, ದಿಗ್ವಿಜಯ್‌ ಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳು ಕೇಳಿಬರಲಾರಂಭಿಸಿದೆ.

ಅಧ್ಯಕ್ಷೀಯ ಸ್ಪರ್ಧೆಯಿಂದ ಗೆಹ್ಲೋಟ್ ಈಗ ಹೊರ ಹೋಗಿದ್ದಾರೆ. ಸೆ.30ರೊಳಗಾಗಿ ಖರ್ಗೆ, ಮುಕುಲ್‌ ವಾಸ್ನಿಕ್‌, ದಿಗ್ವಿಜಯ್‌, ವೇಣುಗೋಪಾಲ್‌ ಪೈಕಿ ಯಾರಾದರೊಬ್ಬರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಗೆಹ್ಲೋಟ್ ಅವರ ನಡೆಯಿಂದ ಹೈಕಮಾಂಡ್‌ಗೆ ತೀವ್ರ ಬೇಸರ ಉಂಟಾಗಿದೆ ಎಂದೂ ಅವರು ಹೇಳಿದ್ದಾರೆ.

ಗಾಂಧಿ ಕುಟುಂಬಕ್ಕಿರುವ ಆಯ್ಕೆ
– ಸಚಿನ್‌ ಪೈಲಟ್‌ಗೆ ಸಿಎಂ ಸ್ಥಾನ ನೀಡಲು ಒಪ್ಪುವಂತೆ ಬಂಡಾಯ ಶಾಸಕರ ಮನವೊಲಿಸಿ ಎಂದು ಗೆಹ್ಲೋಟ್ ರಿಗೆ ಕೇಳಿಕೊಳ್ಳುವುದು.
– ಸಿ.ಪಿ.ಜೋಶಿ ಅವರನ್ನು ಸಿಎಂ ಆಗಿ, ಗೋವಿಂದ್‌ ಸಿಂಗ್‌ರನ್ನು ಡಿಸಿಎಂ ಆಗಿ ನೇಮಿಸುವುದು. ಸಚಿನ್‌ ಪೈಲಟ್‌ಗೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು.

Advertisement

-ಗೆಹ್ಲೋಟ್ ರನ್ನೇ ಸಿಎಂ ಆಗಿ ಮುಂದುವರಿಸಿ, ಬೇರೆ ಯಾರನ್ನಾದರೂ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು. ಆದರೆ ಇದು ಪಕ್ಷದ ಸಂಪೂರ್ಣ ಭವಿಷ್ಯದ ನೀಲನಕ್ಷೆಯನ್ನೇ ಚಿಂದಿಮಾಡಬಹುದು.

-ಗೆಹ್ಲೋಟ್ ಸೇರಿದಂತೆ ಎಲ್ಲ ಬಂಡಾಯ ಶಾಸಕರಿಗೂ ವಿಪ್‌ ಜಾರಿ ಮಾಡಿ, ಸಚಿನ್‌ ಪೈಲಟ್‌ರನ್ನು ಸಿಎಂ ಎಂದು ಘೋಷಿಸುವುದು.
ಸಚಿನ್‌ ಪೈಲಟ್‌ ಅವರಿಗೆ ಕೇಂದ್ರದಲ್ಲಿ ಮಹತ್ವದ ಹುದ್ದೆಯನ್ನು ಕಲ್ಪಿಸುವುದು.

ಗೆಹ್ಲೋಟ್ ಗಿರುವ ಆಯ್ಕೆ
– ಪೈಲಟ್‌ರನ್ನು ಸಿಎಂ ಎಂದು ಒಪ್ಪಿಕೊಂಡು, ತಾವು ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯುವುದು.

– ಗಾಂಧಿ ಕುಟುಂಬದ ಮನವೊಲಿಸಿ,ಸಿಪಿ ಜೋಶಿ ಅವರನ್ನು ಸಿಎಂ ಎಂದೂ, ಪೈಲಟ್‌ರನ್ನು ಕಾಂಗ್ರೆಸ್‌ ರಾಜ್ಯಾಧ್ಯಕ್ಷರೆಂದೂ ಘೋಷಿಸುವಂತೆ ಮಾಡುವುದು

ಪೈಲಟ್‌ಗಿರುವ ಆಯ್ಕೆಗಳು
-ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡು, ಸಿ.ಪಿ. ಜೋಶಿ ಅವರನ್ನು ಸಿಎಂ ಆಗಿ ನೇಮಕ ಮಾಡಲೂ ಒಪ್ಪಿಕೊಂಡು, ತಮ್ಮ ಸಮಯಕ್ಕಾಗಿ ಕಾಯುವುದು

-ಗೆಹ್ಲೋಟ್ ಮನವೊಲಿಸಿ ಹೈಕಮಾಂಡ್‌ ತಮ್ಮನ್ನು ಸಿಎಂ ಮಾಡಬಹುದು ಎಂದು ಕಾಯುವುದು

-ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪಿಸುವುದು ಅಥವಾ ಬೇರೆ ಪಕ್ಷಕ್ಕೆ ಸೇರುವುದು.

ತರೂರ್‌ಗೆ “ಬೆಂಬಲ’ದ ಆಶಾಭಾವ
ರಾಜಸ್ಥಾನದಲ್ಲಿ ಅಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಆ ಬಗ್ಗೆ ತುಟಿ ಬಿಚ್ಚದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ತಮ್ಮಷ್ಟಕ್ಕೆ ತಾವು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ಸೋಮವಾರ ಮಾತನಾಡಿದ ಅವರು, ನನಗೆ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲವಿದೆ. ಅದು ಈಗ ಗೊತ್ತಾಗುವುದಿಲ್ಲ. ನಾನು ನಾಮಪತ್ರ ಸಲ್ಲಿಸುವಾಗ ನನಗೆ ಎಷ್ಟು ಬೆಂಬಲವಿದೆ ಎಂಬುದು ನಿಮಗೆ ತಿಳಿಯಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೇರಳದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‌ ಗಾಂಧಿ ಅವರನ್ನೂ ಭೇಟಿಯಾಗಿ ತರೂರ್‌ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್‌ನ ದುಃಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಆ ಪಕ್ಷದ ಯಾವೊಬ್ಬ ನಾಯಕನೂ ರಾಷ್ಟ್ರೀಯ ಅಧ್ಯಕ್ಷನಾಗಲು ಬಯಸುತ್ತಿಲ್ಲ. ಬದಲಾಗಿ ಸಿಎಂ ಆಗಿಯೇ ಉಳಿಯಲು ಬಯಸುತ್ತಿದ್ದಾರೆ.
-ಸತೀಶ್‌ ಪೂನಿಯಾ,
ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next