Advertisement

ಮಲ್ಲಿಕಾರ್ಜುನ್ ಖರ್ಗೆ ರಾಜಕೀಯವಾಗಿ ಆರಿದ ದೀಪ: ನಳೀನ್ ಕುಮಾರ್ ಟೀಕೆ

10:03 AM Feb 10, 2020 | keerthan |

ಚಿತ್ರದುರ್ಗ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ರಾಜಕೀಯವಾಗಿ ಆರಿದ ದೀಪ. ಅವರು ಕತ್ತಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

Advertisement

ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿ ಕುರಿತು ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಸಾವಿರ ವೋಲ್ಟ್ ಹ್ಯಾಲೋಜಿನ್ ಬಲ್ಪ್ ಇದ್ದಂತೆ. ಇಡೀ ಜಗತ್ತಿಗೆ ಬೆಳಕು ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕನಿಷ್ಠ ವಿಧಾನ ಪರಿಷತ್, ರಾಜ್ಯಸಭೆ ಸದಸ್ಯರನ್ನಾಗಿ ಮಾಡಲಿಲ್ಲ. ಹಾಗಾಗಿ ದುಃಖದಲ್ಲಿ ಮೋದಿ ಟೀಕೆ ಮಾಡಿದ್ದಾರೆ ಎಂದರು.

ಹಿಂದೆ ಬ್ರಿಟೀಷರು ದೇಶವನ್ನು ಒಡೆದು ಆಳಿದರು. ಆನಂತರ ಕಾಂಗ್ರೆಸ್ ಅದೇ ಕೆಲಸ ಮಾಡಿದೆ. ದೇಶ ವಿಭಜನೆ, ವಂದೇ ಮಾತರಂ ವಿಭಜನೆ ಮಾಡಿದರು. ಕಾಂಗ್ರೆಸ್ಸಿನಿಂದ ಹೋದ ಮಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಿದ್ದರು. ಇತ್ತ ನೆಹರು ಜಾತ್ಯಾತೀತ ರಾಷ್ಟ್ರ ಭಾರತವನ್ನು ಅಲ್ಪ ಸಂಖ್ಯಾತ, ಬಹು ಸಂಖ್ಯಾತ ಎಂದು ಹೊಡೆದರು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಕಾಂಗ್ರೆಸ್ಸಿನ ಮತ್ತೊಂದು ಮುಖ. ಅವರು ಕೂಡಾ ಹಿಂದೂ ಮುಸ್ಲಿಂ ಎಂದು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದವರು ಎಂದೂ ಭಾರತ ಮಾತಾ ಕೀ ಜೈ ಎಂದು ಹೇಳಿಲ್ಲ. ರಾಷ್ಟ್ರ ಧ್ವಜ ಹಾರಿಸಿಲ್ಲ‌ ಎಂದರು.

Advertisement

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಸಿದ್ದರಾಮಯ್ಯ ನೋಡಿದರೆ ಅಯ್ಯೊ ಅನ್ನಿಸುತ್ತೆ. ಅವರಿನ್ನೂ ಸಿಎಎಲ್ಪಿ ನಾಯಕನಾಗಲು ಕಾಂಗ್ರೆಸ್ ಹೈಕಮಾಂಡ್ ಕೈ ಕಾಲು ಹಿಡಿಯುತ್ತಿದ್ದಾರೆ. ಅವರ ಸ್ಥಿತಿಯನ್ನು ಯಡಿಯೂರಪ್ಪ ಅವರಿಗೆ ಹೋಲಿಸಿ ಹೇಳುತ್ತಿದ್ದಾರೆ. ಆದರೆ, ಯಡಿಯೂರಪ್ಪ ನಮ್ಮ ನಾಯಕ. ಅವರ ನಿರ್ಧಾರಗಳಿಗೆ ಬೆಂಬಲವಾಗಿ ಇಡೀ ಪಕ್ಷ ನಿಂತಿದೆ ‌ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರ ಅಸಮಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಗೌರವ ಕೊಡಲಾಗಿದೆ. ಎಲ್ಲ ಜಿಲ್ಲೆ, ಎಲ್ಲ ಸಮಾಜಗಳಿಗೂ ಆಧ್ಯತೆ ಕೊಡುತ್ತೇವೆ. ನಮ್ಮ ಪಕ್ಷ ಅಧಿಕಾರದಲ್ಲಿದೆ. ಮುಂದೆ ಅಧಿಕಾರಕ್ಕೆ ಬರುತ್ತೆ. ಎಲ್ಲರಿಗೂ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದರು.

ನಮ್ಮಲ್ಲಿ ಹೊರಗಿನವರು ಮೂಲ ಎಂಬ ಬೇಧ ಇಲ್ಲ. ಹಾಲಿನೊಂದಿಗೆ ಸಕ್ಕರೆಯಂತೆ ಎಲ್ಲರೂ ಬೆರೆತಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next