ನವದೆಹಲಿ: ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಕೆಲವು ಭಾಗವನ್ನು ಕಡತದಿಂದ ತೆಗೆದು ಹಾಕಿದ ವಿಚಾರ ಈಗ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜತೆಗೆ ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಸದಸ್ಯೆ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಸಸ್ಪೆಂಡ್ ಮಾಡಿದ್ದೂ ಅಸಮಾಧಾನ ತಂದಿದೆ.
ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಸೋಮವಾರ ಸಮಾನ ಮನಸ್ಕ ಪಕ್ಷಗಳ ಜತೆಗೆ ಸಭೆ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಕಾಂಗ್ರೆಸ್ ರಣತಂತ್ರ ರೂಪಿಸಲಿವೆ.
“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರಿಸೈಡಿಂಗ್ ಆಫೀಸರ್‌ಗಳ ಮೇಲೆ ಒತ್ತಡ ತಂದು ಅದಾನಿ ಗ್ರೂಪ್ ವಿರುದ್ಧದ ಪ್ರಕರಣದಲ್ಲಿ ಜೆಪಿಸಿ ತನಿಖೆ ನಡೆಯದಂತೆ ತಂತ್ರ ಹೂಡುತ್ತಿದೆ’ ಖರ್ಗೆ ದೂರಿದ್ದಾರೆ.
ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳಿಂದ ಅದಾನಿ ಗ್ರೂಪ್‌ಗೆ 82 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಈ ಬಗ್ಗೆ ತನಿಖೆಯಾಗಬಾರದೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.