ಈ ಹಿಂದೆ “ಆಶೀರ್ವಾದ’ ಹಾಗೂ “ಮಳ್ಳಿ’ ಎಂಬ ಸಿನಿಮಾ ಬಂದಿದ್ದು ನಿಮಗೆ ನೆನಪಿರಬಹುದು. ಆ ಎರಡೂ ಚಿತ್ರಗಳಿಗೆ ಸೆನ್ಸಾರ್‌ನಿಂದ “ಎ’ ಪ್ರಮಾಣ ಪತ್ರ ಸಿಕ್ಕಿತ್ತು. ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದು ಎಸ್.ವಿಷ್ಣುಪ್ರಿಯನ್. ಇಂತಿಪ್ಪ ವಿಷ್ಣು ಪ್ರಿಯನ್ ಈಗ ಸನ್ಮಾರ್ಗದತ್ತ ಮುಖ ಮಾಡಿದ್ದಾರೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ನಾವು ಹೇಳುತ್ತಿರುವುದು ವಿಷ್ಣುಪ್ರಿಯನ್ ಅವರ ಹೊಸ ಸಿನಿಮಾ ಬಗ್ಗೆ.
ವಿಷ್ಣುಪ್ರಿಯನ್ ಈಗ “ಸನ್ಮಾರ್ಗ’ ಎಂಬ ಸಿನಿಮಾ ಮಾಡಿದ್ದಾರೆ. ಸತತ ಎರಡು ಚಿತ್ರಗಳಿಗೆ “ಎ’ ಪ್ರಮಾಣ ಪತ್ರ ಪಡೆದಿದ್ದ ಅವರು ಈ ಚಿತ್ರಕ್ಕೆ “ಯು’ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಹಿಂದಿನ ಅವರ ಎರಡು ಚಿತ್ರಗಳಿಗೆ ಹೋಲಿಸಿದರೆ “ಸನ್ಮಾರ್ಗ’ ಸಂಪೂರ್ಣ ವಿಭಿನ್ನವಾಗಿದೆಯಂತೆ. ಏಕೆಂದರೆ ಇದು ಮಕ್ಕಳ ಸಿನಿಮಾ.
ನಾಲ್ಕು ಜನ ಮಕ್ಕಳು ತಮ್ಮ ಅಂಧ ಸ್ನೇಹಿತನಿಗೆ ದೃಷ್ಟಿ ಬರುವಂತೆ ಮಾಡಬೇಕೆಂದು ಹೊರಡುವ ಹಾದಿಯಲ್ಲಿ ಎದುರಾಗುವ ತೊಂದರೆ ಸೇರಿದಂತೆ ಇತರ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡದೇ ಹೋದಾಗ ಮಕ್ಕಳು ಹೇಗೆ ಪೇಚಿಗೆ ಸಿಲುಕಬೇಕಾಗುತ್ತದ ಎಂಬ ಅಂಶವೂ ಚಿತ್ರದಲ್ಲಿದೆಯಂತೆ.
ಜೊತೆಗೆ ಗುರಿ ಈಡೇರಿಸಿಕೊಳ್ಳಲು ಸನ್ಮಾರ್ಗದಲ್ಲಿ ಸಾಗಬೇಕೆಂಬ ಸಂದೇಶವನ್ನೂ ಕೊಟ್ಟಿದ್ದಾರಂತೆ. ಈ ಚಿತ್ರದಲ್ಲಿ ಯಾವುದೇ ಡಬಲ್ ಮೀನಿಂಗ್ ಆಗಲೀ, ಹಸಿಬಿಸಿ ದೃಶ್ಯಗಳಾಗಲೀ ಇಲ್ಲ. ಚಿತ್ರದ ಟೈಟಲ್‌ನಂತೆ ಸಿನಿಮಾ ಕೂಡಾ ಸನ್ಮಾರ್ಗದಲ್ಲೇ ಸಾಗಿದೆ ಎನ್ನುತ್ತಾರೆ ವಿಷ್ಣುಪ್ರಿಯನ್. ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಚಿತ್ರವನ್ನು ವಿಷ್ಣುಪ್ರಿಯನ್ ನಿರ್ದೇಶಿಸಿದ್ದಲ್ಲದೇ, ಸರೋಜಿನಿ ಸಿನಿಮಾಸ್‌ನಡಿ ಅವರೇ ನಿರ್ಮಾಣ ಕೂಡಾ ಮಾಡಿದ್ದಾರೆ.
ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಡಿಕೇರಿಯಲ್ಲಿ 30 ದಿನಗಳ ಕಾಲ ಚಿತ್ರೀಕರಣವಾಗಿದೆ. ಗುರುತೇಜ್, ಧರ್ಮೆಶ್, ಕಿರಣ್, ಕೌಶಿಕ್ ಪ್ರಮುಖ ಪಾತ್ರ ಮಾಡಿದ್ದು, ಮಹೇಶ್, ರಮಾನಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ವಾಸನ್ ಛಾಯಾಗ್ರಹಣ, ವಿಜಯ್ ಸಂಗೀತವಿದೆ. ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.