ಬೆಂಗಳೂರು: ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ ವಿಚಾರದಲ್ಲಿ ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮಲ್ಲೇಶ್ವರಂ ಠಾಣೆಯ ವೆಂಕಟಾಚಲಯ್ಯ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.
ಮನೆಯ ಹವಾನಿಯಂತ್ರಣ ಯಂತ್ರದ ರಿಪೇರಿಗೆ ಬಂದಿದ್ದ ವ್ಯಕ್ತಿಯೊಬ್ಬ ತಮ್ಮ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಬಗ್ಗೆ ದೂರು ನೀಡಲು ಬಾಲಕನ ಪೋಷಕರು ಜುಲೈ 18ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಇನ್ಸ್‌ಪೆಕ್ಟರ್ ದೂರು ಸ್ವೀಕರಿಸಲು ನಿರಾಕರಿಸಿ ವಾಪಾಸ್ ಕಳುಹಿಸಿದ್ದರು.
ಹೀಗಾಗಿ, ಬಾಲಕನ ಪೋಷಕರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದ ಅಡಿಯಲ್ಲಿ ಇನ್ಸಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಲಿನಿ ಕೃಷ್ಣಮೂರ್ತಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ನಂತರ ದಾಖಲಾದ ದೂರಿನ ಆಧಾರದಲ್ಲಿ ಆರೋಪಿ ಸೈಯದ್ ಆಲಿ (30) ಎಂಬಾತನನ್ನು ಪೊಲೀಸರು ಬಂಧಿಸಿ, ಪೋಕೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚನ್ನಪಟ್ಟಣ ಮೂಲದ ಆರೋಪಿ ಸೈಯಾದ್ ಕಳೆದ ನಾಲ್ಕೈದು ತಿಂಗಳಿನಿಂದ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದಾನೆ.
ಕೆಲ ದಿನಗಳ ಹಿಂದೆ ಮಲ್ಲೇಶ್ವರಂನ ಮನೆಯೊಂದರಲ್ಲಿ ಎಸಿ ರಿಪೇರಿಗೆ ಬಂದಿದ್ದ. ಈ ವೇಳೆ ಮನೆಯ ಮಾಲೀಕರ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಸಂತ್ರಸ್ಥ ಬಾಲಕನ ಪೋಷಕರು ಮೊದಲಿಗೆ ಮಲ್ಲೇಶ್ವರ ಪೊಲೀಸರಿಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.