Advertisement

ಮಲ್ಲಮ್ಮಳ ಆದರ್ಶ ಸಮಾಜಕ್ಕೆ  ದಾರಿದೀಪ: ಶಾಂತಾರಾಂ

05:04 PM May 12, 2018 | Team Udayavani |

ಬಾಗಲಕೋಟೆ: ಭಾರತೀಯ ಸಂಸ್ಕೃತಿಯ ಸಿರಿವಂತಿಕೆ ಹಾಗೂ ಸ್ತ್ರೀ ಕುಲದ ಘನತೆಯನ್ನು ಮೆರೆಸಿದ ಮಹಾಮಾತೆ ಹೇಮರೆಡ್ಡಿ ಮಲ್ಲಮ್ಮಳ ಬದುಕಿನ ಆದರ್ಶಗಳು ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.

Advertisement

ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ ಬೀದಿಗಳಿದು ಹೋರಾಟ ಮಾಡದೇ ವ್ಯವಸ್ಥೆಯ ಒಳಗೆ ಇದ್ದು ಹೋರಾಟ ಮಾಡಿದವರು. ಕಪ್ಪೆ ಕೆಸರಿನಲ್ಲಿ ಒದ್ದಾಡಿ ಬಣ್ಣ ಪಡೆಯುವ ಮೂಲಕ ಮರು ಹುಟ್ಟು ಪಡೆದುಕೊಳ್ಳುತ್ತದೆ. ಅದೇ ರೀತಿ ಗುಹೆ ಒಳಗೆ ಇದ್ದು ಹೋರಾಟ ಮಾಡುವುದು ಕೂಡ ಅರ್ಥವನ್ನು ಪಡೆದುಕೊಳ್ಳುತ್ತದೆ. ಅಂತಹ ಹೋರಾಟದ ಕಿಚ್ಚನ್ನು ರೂಢಿಸಿಕೊಂಡವರು ಹೇಮರೆಡ್ಡಿ ಮಲ್ಲಮ್ಮ ಎಂದರು. ಅವರು ನಡೆದು ಬಂದ ಹಾದಿ, ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಶಶಿಕಲಾ ಮರಬದ ಮಾತನಾಡಿ, ಶಿವಶರಣೆ ಮಲ್ಲಮ್ಮಳು ಒಂದೇ ಜಾತಿ, ಊರಿಗೆ ಸೀಮಿತರಾಗಿರದೇ ಜಾತಿ, ಜನಾಂಗ ಮೀರಿ ವಿಶ್ವ ಮಾನವರಾಗಿದ್ದಾರೆ. ಶ್ರೀಶೈಲದ ದಕ್ಷಿಣ ಭಾಗದಲ್ಲಿ ಹುಟ್ಟಿ, ಹೇಮರೆಡ್ಡಿ ಮನೆತನದ ಸೊಸೆಯಾಗಿ ಬದುಕು ನಡೆಸುವ ಮೂಲಕ ಹೋರಾಟ ಮಾಡಿದವರು. ಇವರ ಹೋರಾಟ ಗುಹೆಯ ತರಹದ್ದಾಗಿದ್ದು, ವ್ಯವಸ್ಥೆಯ ಒಳಗೆ ಹೋರಾಟ ಕೈಗೊಂಡವರು ಹೇಮರೆಡ್ಡಿ ಮಲ್ಲಮ್ಮ ಎಂದರು.

ಜಿಪಂ ಸಿಇಒ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಕೃಷಿ ಇಲಾಖೆ ಉಪನಿರ್ದೇಶಕ ಕೊಂಗವಾಡ, ಸಮಾಜದ ಮುಖಂಡರಾದ ಸಿ.ಕೆ. ಒಂಟಗೋಡಿ, ಜಿ.ಆರ್‌. ಹಡಗಲಿ, ಎಸ್‌.ಪಿ. ಮಾಚಾ, ಮಧುಸೂದನ ಮಾಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಶಿರಸ್ತೇದಾರ ಎಂ.ಬಿ.ಗುಡೂರ ವಂದಿಸಿದರು. ವಿಷಯ ಪರಿವೀಕ್ಷಕಿ ಜಾಸ್ಮೀನ್‌ ಕಿಲ್ಲೆದಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next