ಮಂಗಳೂರು: ಜಿಲ್ಲೆಯಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು ಮಲೇರಿಯಾ, ಡೆಂಗ್ಯೂ ಹೆಚ್ಚುತ್ತಿರುವ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಪ್ರದೇಶಗಳಲ್ಲಿ ಸೂಕ್ತವಾದ ಕ್ರಮ ಕೈಗೊಂಡು ರೋಗವು ಹರಡದಂತೆ ಜಾಗೃತಿ ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲೇರಿಯಾ/ಡೆಂಗ್ಯೂ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡಗಳ ಸುತ್ತಮುತ್ತ ಹಾಗೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಮೇಲ್ಭಾಗದಲ್ಲಿ ನೀರು ನಿಲ್ಲದಂತೆ ಮಾಲಕರಿಗೆ ಸೂಚನೆ ನೀಡಬೇಕು. ಸೊಳ್ಳೆಗಳು ಉತ್ಪತ್ತಿಯಾಗುವ ನೀರು ನಿಂತಿರುವ ಹೊಂಡಗಳಲ್ಲಿ ಗಪ್ಪಿ ಮೀನು ಬಿಡುವ ವ್ಯವಸ್ಥೆಯನ್ನು ಮಾಡಬೇಕು. ಹಲವೆಡೆ ಗುಜರಿ ಅಂಗಡಿಗಳ ಪ್ರದೇಶದಲ್ಲಿ ಸ್ವತ್ಛತೆಯನ್ನು ಕಾಪಾಡದಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಅಂತಹವರಿಗೆ ನೋಟಿಸ್ ನೀಡುವಂತೆ ಅವರು ಸೂಚಿಸಿದರು.
ನಗರ ಪ್ರದೇಶದಲ್ಲಿ ಧ್ವನಿವರ್ಧಕ ಮೂಲಕ ಮಲೇರಿಯಾ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕು. ಆನ್‌ಲೈನ್ ತರಗತಿ ಪ್ರಾರಂಭವಾಗುವ ಮೊದಲು 2 ನಿಮಿಷಗಳ ಕಾಲ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ 2 ನಿಮಿಷಗಳ ವೀಡಿಯೋ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಸಿ ಸೂಚಿಸಿದರು.
ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ನಗರದಲ್ಲಿ ಅಕ್ರಮವಾಗಿ ಹಂದಿಗಳನ್ನು ಸಾಕುತ್ತಿರುವುದು ಕಂಡುಬಂದಿದ್ದು ಅಂತಹ ಕೇಂದ್ರಗಳ ವಿರುದ್ಧ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಡೆಂಗ್ಯೂ ಪ್ರಕರಣಗಳು ಕಂಡುಬಂದಲ್ಲಿ ಅದೇ ದಿನ ಇಲಾಖೆಗೆ ವರದಿ ನೀಡುವಂತೆ ಆಸ್ಪತ್ರೆ ಮತ್ತು ಲ್ಯಾಬ್‌ಗಳಿಗೆ ಅವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ಉಪಸ್ಥಿತರಿದ್ದರು.