ಮಲೇಬೆನ್ನೂರು: ನಾನು ಚಿಕ್ಕವನಿದ್ದಾಗಲೇ ನನಗೆ ನಂದಿಗುಡಿಯ ಹಿಂದಿನ ಪೀಠಾಧಿಪತಿ ಶ್ರೀನಂದೀಶ್ವರ ಶಿವಾಚಾರ್ಯ ಶ್ರೀಗಳು ಸನ್ಯಾಸ ಮರಿ ದೀಕ್ಷೆ ನೀಡಿದ್ದರು. ಆ ದೀಕ್ಷೆ ನಂದಿಗುಡಿ ಮಠದ ಉತ್ತರಾಧಿಕಾರತ್ವಕ್ಕೋ? ಅಥವಾ ಬೇರೆ ಉದ್ದೇಶಕ್ಕೋ? ಎಂಬುದು ನನಗೆ ತಿಳಿದಿಲ್ಲ. ಇದನ್ನು ನನಗೆ ದೀಕ್ಷೆ ನೀಡಿದ ಶ್ರೀಗಳೇ ಉತ್ತರಿಸಬೇಕಿದೆ ಎಂದು ರುದ್ರಯ್ಯ ಸ್ವಾಮಿ ತಿಳಿಸಿದರು.
ಪಟ್ಟಣದ ಬಿ.ಕೆ. ರುದ್ರಯ್ಯ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿಗುಡಿಯ ನಂದೀಶ್ವರ ಶ್ರೀಗಳು 2004ರಲ್ಲಿ ಹಾವೇರಿ ಜಿಲ್ಲೆ ಅತ್ತಿಕಟ್ಟೆಯ ಶಾಖಾಮಠದಲ್ಲಿ ನನಗೆ ಸನ್ಯಾಸ ಮರಿದೀಕ್ಷೆ ನೀಡಿದ್ದರು. ಆಗ ನಾನು ನಂದಿಗುಡಿಯಲ್ಲಿ 6ನೇ ತರಗತಿ ಓದುತ್ತಿದ್ದೆ. ಇನ್ನೂ ಚಿಕ್ಕವನಾಗಿದ್ದೆ. ಆಗ ಸನ್ಯಾಸ, ದೀಕ್ಷೆ ಇದ್ಯಾವುದರ ಬಗ್ಗೆಯೂ ಜ್ಞಾನವಿರಲಿಲ್ಲ ಎಂದರು.
ಅಂದು ನಡೆದ ಸನ್ಯಾಸ ದೀಕ್ಷೆಯಲ್ಲಿ ನನ್ನ ಜತೆ ಶ್ರೀಮುಮ್ಮಡಿ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮರಿದೇವ ಸ್ವಾಮೀಜಿಯವರಿಗೂ ಸನ್ಯಾಸ ದೀಕ್ಷೆ ನೀಡಿದ್ದರು. ಇವರಲ್ಲಿ ಶ್ರೀ ಸೋಮಶೇಖರ ಸ್ವಾಮೀಜಿ ಹಾಸನ ಜಿಲ್ಲೆಯ ಪುಷ್ಪಗಿರಿ ಶಾಖಾಮಠದ ಪೀಠಾಧಿಪತಿಯಾಗಿ, ಶ್ರೀ ಮುಮ್ಮಡಿ ದೇಶಿಕೇಂದ್ರ ಸ್ವಾಮೀಜಿ ನಂದಿಗುಡಿ ಮಠದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
2006ರಲ್ಲಿ ನಂದೀಶ್ವರ ಶ್ರೀಗಳು ನಾಪತ್ತೆಯಾದ ಬಳಿಕ ನನ್ನ ವಿದ್ಯಾಭ್ಯಾಸ ಜವಾಬ್ದಾರಿ ಯಾರೂ ವಹಿಸಿಕೊಳ್ಳದ ಕಾರಣ ನಮ್ಮ ತಂದೆಯವರು ಕಾವಿ ಬಟ್ಟೆ ತೆಗೆಸಿ ಹೊನ್ನಾಳಿಯ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಗೆ ಸೇರಿಸಿದರು. ಸಮಾಜದ ಕೆಲ ಮುಖಂಡರು ಸಭೆ ಸೇರಿ ನನ್ನ ಮುಂದಿನ ವಿದ್ಯಾಭ್ಯಾಸ ಜವಾಬ್ದಾರಿ ತೆಗೆದುಕೊಂಡು ಬೆಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ 10ನೇ ತರಗತಿಗೆ ಸೇರಿಸಿದರು. ಅಲ್ಲಿನ ಗುರುಗಳು ಬ್ರಹ್ಮಚರ್ಯ ದೀಕ್ಷೆ ನೀಡಿದರು. ವೇದ, ಉಪನಿಷತ್ತು, ಯೋಗ, ಆಧ್ಯಾತ್ಮ ತರಬೇತಿ ನೀಡಿದರು. ಅಲ್ಲಿ ಬಿಸಿಎ ಪದವಿ ಪಡೆದೆ. ಈ ಮಧ್ಯೆ ಬಿಸಿಎ ಅಭ್ಯಾಸ ಮಾಡುತ್ತಿರುವಾಗ ಋಷಿಕೇಶ, ಹರಿದ್ವಾರಕ್ಕೆ ತೆರಳಿ ಯೋಗ-ಆಧ್ಯಾತ್ಮ ಜ್ಞಾನಗಳಲ್ಲಿ ತರಬೇತಿ ಪಡೆದೆ ಎಂದರು.
ಇತ್ತೀಚೆಗೆೆ ನಂದಿಗುಡಿ ಮಠದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನನಗೆ ತಿಳಿದಿಲ್ಲ. ನಾನು ಪೀಠದ ಮೇಲಿನ ಆಸೆಗಾಗಿ ಸತ್ಸಂಗವಾಗಲಿ, ಗೋಷ್ಠಿಯಾಗಲಿ ಮಾಡುತ್ತಿಲ್ಲ. ನನಗೆ ತಿಳಿದಿರುವ ಜ್ಞಾನವನ್ನು ಭಕ್ತರಿಗೆ ತಿಳಿಸುತ್ತಿದ್ದೇನೆ. ಪೀಠಾಧಿಪತಿಯಾಗಬೇಕೆಂದು ಇಲ್ಲಿಗೆ ಬಂದಿಲ್ಲ. ಆ ವಿಚಾರಗಳು ನೊಳಂಬ ಲಿಂಗಾಯತ ಸಮಾಜಕ್ಕೆ ಬಿಟ್ಟಿದ್ದು. ಸಮುದಾಯದ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ರುದ್ರಯ್ಯ ಸ್ವಾಮೀಜಿ ತಿಳಿಸಿದರು.
ಸಮಾಜದಲ್ಲಿ ಈಗಾಗಲೇ ಗೊಂದಲಗಳಿವೆ. ನಾನು ಮತ್ತಷ್ಟು ಗೊಂದಲ ಮಾಡಲು ಬಯಸಲ್ಲ. ಕಾಲವೇ ಎಲ್ಲವನ್ನೂ ತಿಳಿಸುತ್ತದೆ. ಸಮಾಜದ ಒಳಿತಿಗೋಸ್ಕರ ಸೇವೆ ಮಾಡಲು ಬಯಸಿದ್ದೇನೆ. ಸಮಾಜಕ್ಕೆ ಆಧ್ಯಾತ್ಮ, ಯೋಗ, ಜ್ಞಾನ, ಪ್ರಾಣಾಯಾಮ ಮುಂತಾದವುಗಳ ಬಗ್ಗೆ ತರಬೇತಿ ನೀಡುವುದು ನನ್ನ ಆಸೆಯಾಗಿದೆ ಎಂದರು.
ಬಾಬಾ ರಾಮದೇವ್ ಮತ್ತು ಸಿದ್ದೇಶ್ವರ ಸ್ವಾಮಿಗಳ ಶಿಷ್ಯನಾಗಿ ಆಧ್ಯಾತ್ಮವನ್ನು ರೂಢಿಸಿಕೊಂಡು 2014ರಿಂದ ಇಲ್ಲಿಯವರೆಗೂ ದುಬೈ, ಸಿಂಗಾಪೂರ್, ಮಲೇಷಿಯಾ, ಕೆನಡಾಗಳಲ್ಲಿ ಯೋಗ, ಪ್ರಾಣಾಯಾಮ, ಆಧ್ಯಾತ್ಮ ತರಬೇತಿ ನೀಡಿದ್ದೇನೆ. ಅದೇ ರೀತಿ ಇಲ್ಲಿನ ಸಮಾಜ ಬಾಂಧವರು ಬಯಸಿದ ಕಾರಣ ಇಲ್ಲಿಗೆ ಬಂದು ಮಲೆಬೆನ್ನೂರು ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಸತ್ಸಂಗ, ಆಧ್ಯಾತ್ಮ, ಪ್ರಾಣಾಯಾಮ, ಯೋಗ ಕುರಿತು ತರಬೇತಿ ನೀಡುತ್ತಿದ್ದೇನೆ ಅತಎಂದರು. ಸುದ್ದಿಗೋಷ್ಠಿಯಲ್ಲಿ ಎಚ್. ಮಹಂತಯ್ಯ, ಇಂದೂಧರ್ ಎನ್. ರುದ್ರಗೌಡ, ಪ್ರಸನ್ನಕುಮಾರ್, ಜಿಗಳೇರ ಹಾಲೇಶಣ್ಣ ದಾನಪ್ಪ, ಶಿವರಾಜ್, ಗಜೇಂದ್ರಯ್ಯ ಇದ್ದರು.