Advertisement

ಬೆಳೆ ಹಾನಿಗೆ ಹೆಚ್ಚಿನ ಪರಿಹಾರದ ಭರವಸೆ

10:22 AM May 23, 2019 | Naveen |

ಮಲೇಬೆನ್ನೂರು: ಮಂಗಳವಾರ ಸುರಿದ ಆಲಿಕಲ್ಲಿ ಮಳೆ-ಗಾಳಿಯಿಂದ ಮಲೇಬೆನ್ನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ನುಡಿದರು.

Advertisement

ಅವರು ಬೆಳೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕೆಲವೆಡೆ ಮಳೆ ಬಾರದೆ ರೈತರ ಬೆಳೆಹಾನಿಯಾಗುತ್ತಿದ್ದರೆ, ಕೆಲವು ಕಡೆ ಮಳೆ ಬಂದು ಹಾಳಾಗುತ್ತಿದೆ. ಪ್ರಕೃತಿ ವಿಕೋಪದಿಂದ ರೈತರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಹರಳಹಳ್ಳಿ, ಗುಳದಹಳ್ಳಿ, ಮಲ್ಲ ನಾಯಕನಹಳ್ಳಿ, ಮಲ್ಲನಾಯಕನಹಳ್ಳಿ ಕ್ಯಾಂಪ್‌, ಹಾಲಿವಾಣ, ದಿಬ್ಬದ ಹಳ್ಳಿ, ಕೊಪ್ಪ, ಚಿಕ್ಕತಮ್ಮನಹಳ್ಳಿಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದೇನೆ ಎಂದರು.

ಒಂದು ಎಕರೆಗೆ ಸುಮಾರು 30 ರಿಂದ 40 ಚೀಲ ಭತ್ತ ಬೆಳೆಯುತ್ತಿದ್ದು, ಈಗ 3 ರಿಂದ 4 ಚೀಲ ಭತ್ತ ಸಿಗುವುದೂ ಕಷ್ಟವಾಗಿದೆ. ಆದ್ದರಿಂದ ಪ್ರಕೃತಿ ವಿಕೋಪ ಯೋಜನೆಯಡಿ ಪರಿಹಾರಕ್ಕಾಗಿ ಅಧಿಕಾರಿಗಳು ತಕ್ಷಣ ಸರ್ಕಾರಕ್ಕೆ ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಕೇಂದ್ರ ನೀರಾವರಿ ಇದ್ದಲ್ಲಿ ಪ್ರತಿ ಹೆಕ್ಟೇರ್‌ಗೆ 13,500 ರೂ. ಪರಿಹಾರ ನೀಡುತ್ತದೆ ಎಂದರು.

ರಾಜ್ಯ ಸರ್ಕಾರವು ಇತ್ತ ಗಮನ ಹರಿಸಿ ರೈತರಿಗಾದ ನಷ್ಟವನ್ನು ನೀಡುವುದರ ಮೂಲಕ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ರೈತರ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಂತೆ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ಈ ಮೂಲಕ ಒತ್ತಾಯ ಮಾಡುತ್ತೇನೆ ಎಂದರು

Advertisement

ಹರಳಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕ ಎಸ್‌. ರಾಮಪ್ಪ ಅವರೂ ಕೂಡ ಅದೇ ಸಮಯದಲ್ಲಿ ಬೆಳೆ ಹಾನಿ ವೀಕ್ಷಣೆಗೆ ಆಗಮಿಸಿದ್ದರಿಂದ ಸಂಸದ ಮತ್ತು ಶಾಸಕ ಇಬ್ಬರೂ ರೈತರ ಸಮಸ್ಯೆ ಆಲಿಸಿದರು.

ಹರಳಹಳ್ಳಿ, ಹಾಲಿವಾಣ, ಮಲ್ಲನಾಯಕನಹಳ್ಳಿ ಗ್ರಾಮಗಳಲ್ಲಿ ಹೆಚ್ಚು ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಪರಿಹಾರ ಸಿಗುವಂತೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರದಿಂದ ಹೆಚ್ಚು ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಒತ್ತಾಯ ಮಾಡುತ್ತೇನೆ ಎಂದು ಶಾಸಕ ರಾಮಪ್ಪ ಭರವಸೆ ನೀಡಿದರು.

ಎಲ್ಲಿ ಏನು, ಎಷ್ಟು ಹಾನಿ?
ಹಾಲಿವಾಣ ಗ್ರಾಮದಲ್ಲಿ 1218 ಎಕರೆ ಭತ್ತದ ಬೆಳೆ ನಾಶವಾಗಿದೆ. ಹರಳಹಳ್ಳಿಯಲ್ಲಿ 980 ಎಕರೆ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿದೆ ಹಾಗೂ 1 ಆರ್‌ಸಿಸಿ ಮನೆ ಭಾಗಶಃ ಹಾನಿಯಾಗಿದೆ. ಮಲ್ಲನಾಯಕನಹಳ್ಳಿಯಲ್ಲಿ 320ಎಕರೆ ಭತ್ತ, 6 ಎಕರೆ ಅಡಿಕೆ, 14 ಎಕರೆ ಬಾಳೆ ನಷ್ಟವಾಗಿದೆ. ಮೂಡಲಬಸಾಪುರ, ಗುಳದಹಳ್ಳಿ ಮತ್ತು ಸಂಕ್ಲೀಪುರ ಗ್ರಾಮಗಳಲ್ಲಿ 50 ಎಕರೆ ಭತ್ತ ನಷ್ಟವಾಗಿದೆ.

ದಿಬ್ಬದಹಳ್ಳಿಯಲ್ಲಿ 50 ಎಕರೆ ಭತ್ತ ಮತ್ತು 20 ಎಕರೆ ಬಾಳೆ ನಷ್ಟವಾಗಿದೆ. ಕೊಪ್ಪ ಗ್ರಾಮದಲ್ಲಿ 40 ಎಕರೆ ಭತ್ತ ಮತ್ತು 60 ಎಕರೆ ಬಾಳೆ ಹಾಳಾಗಿದೆ. ಚಿಕ್ಕ ತಮ್ಮಹಳ್ಳಿಯಲ್ಲಿ 80 ಎಕರೆ ಭತ್ತ, 10 ಎಕರೆ ಬಾಳೆ ಹಾಗೂ 10 ಎಕರೆ ಎಲೆ ಬಳ್ಳಿ ಹಾಳಾಗಿದೆ.

ಕೊಮಾರನಹಳ್ಳಿಯಲ್ಲಿ 180 ಬಾಳೆಗಿಡಗಳು ಧರೆಗುರಳಿವೆ. ಮಲೇಬೆನ್ನೂರಿನಲ್ಲಿ 185 ಎಕರೆ ಭತ್ತ, ಕುಂಬಳೂರಿನಲ್ಲಿ 112 ಎಕರೆ ಭತ್ತ ಮತ್ತು 2 ಎಕರೆ ಬಾಳೆ ತೋಟ ಹಾಳಾಗಿವೆ ಎಂದು ಕಂದಾಯ ಮತ್ತು ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next