Advertisement

ಮಲೆ ಮಹದೇಶ್ವರ ಯುಗಾದಿ ಜಾತ್ರೆ ಸಂಪನ್ನ

03:41 PM Apr 04, 2022 | Team Udayavani |

ಹನೂರು: ಉಘೇ ಮಾದಪ್ಪ, ಉಘೇ.. ಮಾಯ್ಕರ ಮಾದಪ್ಪನಿಗೆ ಉಘೇ.. ಎಂಬ ಲಕ್ಷಾಂತರ ಭಕ್ತರ ಘೋಷಣೆಯೊಂದಿಗೆ ಮಲೆ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಯ ಮಹಾರಥೋತ್ಸವವು ವಿಜೃಂಭಣೆ ಯಿಂದ ಜರುಗಿತು.

Advertisement

ತಾಲೂಕಿನ ಪವಾಡ ಪುರುಷನ ಪುಣ್ಯಕ್ಷೇತ್ರ, ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಲ್ಕು ದಿನಗಳಿಂದ ಶ್ರದ್ಧಾ ಭಕ್ತಿಯಿಂದ ಜರುಗುತ್ತಿದ್ದ ಯುಗಾದಿ ಜಾತ್ರಾ ಮಹೋತ್ಸವವು ಮಹಾರಥೋತ್ಸವದೊಂದಿಗೆ ಸಂಪನ್ನವಾಯಿತು. ರಥೋತ್ಸವವನ್ನು ಶನಿವಾರ ಬೆಳಗ್ಗೆ 7.30ರಿಂದ 9ರವ ರೆಗಿನ ಶುಭ ಲಗ್ನದಲ್ಲಿ ನಿಗದಿಪಡಿಸಲಾಗಿತ್ತು. ಅದರಂತೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀ ಗಳನ್ನು ಸತ್ತಿಗೆ, ಸುರಪಾನಿ, ಮಂಗಳವಾದ್ಯಗಳೊಂದಿಗೆ ದೇವಾಲಯದ ಆವರಣಕ್ಕೆ ಕರೆತರಲಾಯಿತು.

ಬಳಿಕ ಬೇಡಗಂಪಣ ಅರ್ಚಕರು ಸಿದ್ಧಪಡಿಸಿ ಇಟ್ಟಿದ್ದ ಉತ್ಸವಮೂರ್ತಿಗಳ ದಿವ್ಯಸಾನ್ನಿಧ್ಯದಲ್ಲಿ ಧೂಪ-ದೀಪ ಮಂಗಳಾರತಿ ಸೇವೆ ಪ್ರಜಾ ಕೈಂಕರ್ಯಗಳನ್ನು ವಿಧಿ ವಿಧಾನ ಗಳೊಂದಿಗೆ ನೆರವೇರಿಸಿ, ಬಿಳಿ ಆನೆ ಉತ್ಸವ ನೆರವೇರಿಸಲಾಯಿತು.

ಬಳಿಕ ಉತ್ಸವಮೂರ್ತಿಗಳನ್ನು ದೇವಾಲ ಯದ ಹೊರಾಂಗಣದಲ್ಲಿ ಸಿದ್ಧಪಡಿಸಲಾಗಿದ್ದ ಮಹಾರಥೋತ್ಸವದ ಬಳಿಗೆ ಮೆರವಣಿಗೆಯಲ್ಲಿ ಹೊತ್ತು ತಂದು, ಹೂ, ತಳಿರು-ತೋರಣಗಳಿಂದ ಸಿಂಗರಿಸಲಾಗಿದ್ದ ಮಹಾರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಪೂಜಾ ಕೈಂಕರ್ಯ ನೆರವೇರಿಸಿ, ಬೂದುಗುಂಬಳ ಕಾಯಿ ಯಿಂದ ಆರತಿ ಬೆಳಗಿ, ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉಘೇ ಮಾದಪ್ಪ, ಉಘೇ..: ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತಾದಿಗಳ ಉಘೇ ಮಾದಪ್ಪ, ಉಘೇ.. ಘೋಷ ವಾಕ್ಯಗಳು, ಜಯಘೋಷಗಳು ಶ್ರೀಕ್ಷೇತ್ರಾದ್ಯಂತ ಮಾರ್ದನಿಸಿತು.

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಲಕ್ಷಾಂತರ ಭಕ್ತರು ಹೂ-ಹಣ್ಣು, ದವನ, ಚಿಲ್ಲರೆನಾಣ್ಯ ರಥಕ್ಕೆ ಎಸೆದು, ತಮ್ಮ ಜಮೀನಿನಲ್ಲಿ ಬೆಳೆದು ತಂದಿದ್ದ ದವಸ-ಧಾನ್ಯ ಅರ್ಪಿಸಿ, ಭಕ್ತಿಯನ್ನು ಸಮರ್ಪಿಸಿದರು.

Advertisement

ರಂಗುನೀಡಿದ ಕಲಾ ತಂಡಗಳು: ಮಹಾರಥೋತ್ಸವದ ಮುಂಭಾಗ ಹಸಿರು ಸೀರೆ ಕುಪ್ಪಸ ಧರಿಸಿದ್ದ ಬೇಡಗಂಪಣ ಕುಲದ 108ಹೆಣ್ಣುಮಕ್ಕಳು, ಬೆಲ್ಲದ ಆರತಿ ಬೆಳಗುವ ಮೂಲಕ ಮಹಾರಥೋತ್ಸವಕ್ಕೆ ರಂಗು ತಂದರು. ಇದಲ್ಲದೆ ತಲಕಾಡಿನ ಬಿ.ಕೆ. ಮೋಹನ್‌ ಮತ್ತು ತಂಡದವರಿಂದ ಪೂಜಾ ಕುಣಿತ, ಹರದನ ಹಳ್ಳಿಯ ಗುರುಮಲ್ಲಶೆಟ್ಟಿ ಮತ್ತು ತಂಡದವ ರಿಂದ ಹುಲಿವೇಷ ತಂಡ, ರಾಮಸಮುದ್ರದ ಮಹ ದೇವ ಸ್ವಾಮಿ ಮತ್ತು ತಂಡದವರಿಂದ ಕಂಸಾಳೆ ತಂಡ ಮತ್ತು ಚಾಮರಾಜನಗರದ ಕುಮಾರ್‌ ಮತ್ತು ತಂಡದ ಡೊಳ್ಳುಕುಣಿತ ತಂಡ ಮೆರವಣಿಗೆಗೆ ರಂಗು ನೀಡಿದವು. ಅಲ್ಲದೆ, ಎಂದಿನಂತೆ ಸತ್ತಿಗೆ- ಸುರ ಪಾನಿ, ಮಂಗಳವಾದ್ಯ, ನಂದಿಕಂಬ, ಛತ್ರಿ-ಛಾಮರ ಗಳು ರಂಗುತಂದವು.

ಮಹಾರಥೋತ್ಸವವು ದೇವಾಲಯದ ಹೊರಾಂಗಣವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕು ತ್ತಿದ್ದಂತೆ ಮಹಾರಥೋತ್ಸವಕ್ಕೆ ತೆರೆಬಿದ್ದಿತು. ಈ ವೇಳೆ ಭಕ್ತರು ರಥಕ್ಕೆ ನಮಸ್ಕರಿಸುತ್ತಾ ಧನ್ಯತೆ ಮೆರೆದರು.

ಭಕ್ತರ ದಂಡು: ಮಹಾರಥೋತ್ಸವ ಹಿನ್ನೆಲೆ ಶ್ರೀಕ್ಷೇತ್ರ ದಲ್ಲಿ ಭಕ್ತರ ದಂಡೇ ನೆರೆದಿತ್ತು.  ರಾಜ್ಯದ ಚಾಮರಾಜನಗರ, ಮೈಸೂರು, ಹುಣಸೂರು, ಪಿರಿಯಾ ಪಟ್ಟಣ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಸಾತನೂರು, ಕನಕಪುರ ಸೇರಿದಂತೆ ಮೂಲೆ ಮೂಲೆಗಳಿಂದ, ನೆರೆಯ ತಮಿಳುನಾಡು ರಾಜ್ಯದಿಂದ ಆಗಮಿಸಿದ್ದರು.

ಇನ್ನು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಕೆಲ ಭಕ್ತರು ಮಹಾರಥೋತ್ಸವ, ಮಾದಪ್ಪನನ್ನು ಕಣ್ತುಂಬಿಕೊಂಡು ಸ್ವಗ್ರಾಮಗಳತ್ತ ಹಿಂದಿರುಗಿದರೆ, ಇನ್ನು ಕೆಲ ಭಕ್ತರು ರಜೆಗಳಿದ್ದ ಹಿನ್ನೆಲೆ ನಾಗಮಲೆ, ಪ್ರವಾಸಿತಾಣ ಹೊಗೇನಕಲ್‌, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಜಿಲ್ಲೆಯ ಇತರ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳತ್ತ ತೆರಳಿದರು.

-ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next