Advertisement
ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದುವರೆಗೂ ಈ ದೇವಾಲಯ ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಬರುವ ಎರಡನೇ ದೇಗುಲ ಎಂಬ ಖ್ಯಾತಿ ಮಲೆ ಮಹದೇಶ್ವರ ದೇವಸ್ಥಾನಕ್ಕಿತ್ತು. ಆಗ ದೇವಾಲಯಕ್ಕೆ ಹರಿದು ಬಂದ ಹುಂಡಿಯ ಹಣ, ಸೇವೆಗಳ ಆದಾಯ ಇಲಾಖೆಗೆ ಹೋಗುತ್ತಿತ್ತು. ಆದರೆ, ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ದೇಗುಲದ ಹುಂಡಿ ಮತ್ತು ಸೇವೆಗಳಿಂದ ಬಂದ ಆದಾಯ ಪ್ರಾಧಿಕಾರಕ್ಕೆ ಸೇರುತ್ತದೆ.
Related Articles
Advertisement
ಕೆಟ್ಟು ನಿಂತ ಸೋಲಾರ್ ವಾಹನ: ವೃದ್ಧರು, ದಿವ್ಯಾಂಗರನ್ನು ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಗೇಟ್‌ನಿಂದ ದೇವಸ್ಥಾನಕ್ಕೆ ಕರೆದೊಯ್ಯಲು ಸೋಲಾರ್ ಚಾಲಿತ ವಾಹನವೊಂದು ಇತ್ತು. ಇದರಿಂದ ವೃದ್ಧರಿಗೆ, ನಡೆಯಲಾಗದವರಿಗೆ ಅನುಕೂಲವಾಗಿತ್ತು. ಈಗ ಆ ವಾಹನ ಕೆಟ್ಟು ನಿಂತು ಹಲವು ತಿಂಗಳಾಗಿವೆ. ಅದನ್ನು ದುರಸ್ತಿ ಮಾಡಬೇಕಾಗಿದೆ.
ಸ್ವಚ್ಛತೆಯ ಕೊರತೆ: ಸಾಮಾನ್ಯವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಮೊದಲ ಬಾರಿಗೆ ಬರುವ ಅಥವಾ ಅನೇಕ ವರ್ಷಗಳ ನಂತರ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಒಂದು ಸುಂದರ ಕಲ್ಪನೆ ಇರುತ್ತದೆ. ಎಲ್ಲ ಬಹಳ ನೀಟ್ ಆಗಿ, ಸ್ವಚ್ಛವಾಗಿರಬಹುದು ಎಂದುಕೊಂಡಿರುತ್ತಾರೆ. ಆದರೆ, ಇಲ್ಲಿಗೆ ಭೇಟಿ ನೀಡಿದಾಗ ಅವರಿಗೆ ತಮ್ಮ ಕಲ್ಪನೆಯಷ್ಟು ಸ್ವಚ್ಛತೆ ಇಲ್ಲಿಲ್ಲ ಎಂಬ ವಾಸ್ತವ ತಿಳಿಯುತ್ತದೆ. ಪ್ರಾಧಿಕಾರ ಇದರ ಬಗ್ಗೆ ಎಲ್ಲಕ್ಕಿಂತ ಮೊದಲು ಗಮನ ಹರಿಸಬೇಕಾಗಿದೆ. ಯಾತ್ರಾ ಸ್ಥಳದಲ್ಲಿ ಜನ ಎಲ್ಲೆಂದರಲ್ಲಿ ಕಸ ಸುರಿ ಯುತ್ತಾರೆ. ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಪ್ರಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ, ಅದನ್ನು ಸರಿಯಾಗಿ ಜಾರಿಗೆ ತಂದಿಲ್ಲ. ಪ್ರಾಧಿಕಾರ ಈ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ದೇವಾಲಯದ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಅಚ್ಚುಕಟ್ಟುತನ ಕಾಯ್ದುಕೊಳ್ಳಬೇಕೆಂಬುದು ಬಹುತೇಕ ಪ್ರವಾಸಿಗರ ಅನಿಸಿಕೆ.
ಶೌಚಾಲಯ ಬೇಕು: ಜಾತ್ರೆ ಸಂದರ್ಭದಲ್ಲಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಹೀಗಾಗಿ ಅನೇಕರು ಬಯಲಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದು ಯಾತ್ರಾ ಸ್ಥಳದ ಸ್ವಚ್ಛತೆಗೆ ದೊಡ್ಡ ತೊಡಕಾಗಿದೆ. ಅಂತರಗಂಗೆಯಲ್ಲಿ ಭಕ್ತರು ಸ್ನಾನ ಮಾಡಿ ಹಳೆಯ ಬಟ್ಟೆಗಳನ್ನು ಬಿಸಾಡುವುದು, ಪ್ಲಾಸ್ಟಿಕ್ ಎಸೆಯುವುದು, ಸೋಪಿನ ಕವರ್‌ಗಳನ್ನು ನೀರಿಗೆ ಎಸೆಯುವುದು ಮಾಡುತ್ತಿದ್ದಾರೆ.
ಪ್ರವಾಸಿಗರಿಗೆ ಮಾರ್ಗದರ್ಶನ ಬೇಕು: ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ಶಿಸ್ತುಬದ್ಧವಾಗಿ ಮಾಹಿತಿ ಮಾರ್ಗದರ್ಶನ ನೀಡುವ ಸೆಂಟರ್‌ನ ಅಗತ್ಯವಿದೆ. ಅಲ್ಲಿ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠಕ್ಕೆ ಎಷ್ಟು ಅಂತರವಿದೆ? ನಾಗಮಲೆಗೆ ಹೇಗೆ ಹೋಗಬೇಕು? ಅದು ಎಷ್ಟು ದೂರ ಇದೆ? ಮಹದೇಶ್ವರರ ಪ್ರತಿಮೆ ಸ್ಥಳಕ್ಕೆ ಹೇಗೆ ಹೋಗಬೇಕು? ಇಂಥ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕಿದೆ. ಅದಕ್ಕಾಗಿ ಕಾಲ್ ಸೆಂಟರ್ ಗಳಂತೆ ತಾಳ್ಮೆಯಿಂದ ಮಾಹಿತಿ ನೀಡುವ ಯುವಕ ಯುವತಿಯರನ್ನು ನಿಯೋಜಿಸಬಹುದಾಗಿದೆ.
ಮಾದಪ್ಪನ ಬೆಟ್ಟದಲ್ಲಿ ಕಾಡುಹಂದಿಗಳ ಕಾಟ : ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಡುಹಂದಿಗಳ ಕಾಟ ಮಿತಿ ಮೀರಿದೆ. ಈಗಾಗಲೇ ಸ್ಥಳೀಯರು ಮಾತ್ರವಲ್ಲದೆ, ಭಕ್ತರ ಮೇಲೂ ದಾಳಿ ಮಾಡಿ ಗಾಯಗೊಳಿಸಿವೆ. ಕೆಲವು ತಿಂಗಳ ಹಿಂದೆ ನಾಲ್ಕೆದು ದಿನಗಳ ಅಂತರದಲ್ಲಿ ಸ್ಥಳೀಯರಿಬ್ಬರ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದವು. ಬೃಹತ್ ತಂಗುದಾಣದಲ್ಲಿ ಮಲಗಿದ್ದ ಭಕ್ತರ ಮೇಲೆ ಕಾಡುಹಂದಿಗಳ ಹಿಂಡು ದಾಳಿ ಮಾಡಿದ್ದವು. ಕಾಲ್ನಡಿಗೆಯಲ್ಲಿ ಬರುವ ಭಕ್ತರು ಸಾಮಾನ್ಯವಾಗಿ ದೇವಸ್ಥಾನದ ಪಕ್ಕದ ರಂಗಮಂದಿರ, ತಂಗುದಾಣಗಳಲ್ಲಿ ಮಲಗುತ್ತಾರೆ. ಬಡ ಭಕ್ತರು ಕೊಠಡಿಗಳನ್ನು ಬಾಡಿಗೆ ಪಡೆಯದೆ, ದೇವಸ್ಥಾನದ ಸುತ್ತಮುತ್ತಲಿನ ಕಡೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇಲ್ಲೆಲ್ಲ ಅಡ್ಡಾಡುವ ಕಾಡುಹಂದಿಗಳ ಗುಂಪು, ಭಕ್ತರು ಇಟ್ಟಿರುವ ಲಗ್ಗೇಜುಗಳ ಕಡೆಗೆ ಬರುತ್ತವೆ. ಓಡಿಸಲು ಮುಂದಾದ ಭಕ್ತರ ಮೇಲೆ ದಾಳಿ ಮಾಡುತ್ತವೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರಿಂದ ದೇವರ ದರ್ಶನಕ್ಕಾಗಿ ಬಂದವರು ಕಾಡುಹಂದಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಬಡಾವಣೆಗಳಲ್ಲಿ ಹಂದಿಗಳ ಹಾವಳಿ: ಹಂದಿಗಳಿಗೆ ಬೆಟ್ಟದ ಬಡಾವಣೆಗಳೇ ವಾಸಸ್ಥಳವಾಗಿದೆ. ಅಂದರೆ, ಈ ಬಡಾವಣೆಗಳು ಎಷ್ಟರ ಮಟ್ಟಿಗೆ ಗಬ್ಬೆದ್ದು ನಾರುತ್ತಿವೆ ಎನ್ನುವುದು ಅರ್ಥವಾಗುತ್ತದೆ. ಇಲ್ಲಿ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ರಸ್ತೆ ಬದಿಗಳಲ್ಲಿ ಕಸದ ರಾಶಿ ಹರಡಿದೆ. ಚರಂಡಿಗಳಲ್ಲಿ ಗಲೀಜು ತುಂಬಿಕೊಂಡಿದೆ. ಚರಂಡಿ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಈ ಕೊಳಚೆ ಸ್ಥಳಗಳಲ್ಲಿ ಕಾಡುಹಂದಿಗಳು ವಾಸಿಸುತ್ತಿವೆ. ದೇವಸ್ಥಾನದ ಸುತ್ತಮುತ್ತವೂ ವಿಲೇವಾರಿ ಆಗದ ಕಸದಲ್ಲಿ ಆಹಾರ ಹುಡುಕುತ್ತ ಅಲೆಯುತ್ತಿವೆ.
ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ ವಹಿಸುವರೇ ಕಾಳಜಿ? : ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯವರೇ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಜರಾಯಿ ಸಚಿವರೀರ್ವರು ಉಪಾಧ್ಯಕ್ಷರು. ಮಲೆ ಮಹದೇಶ್ವರ ದೇವಾಲಯಕ್ಕೆ ಬರುವ ಭಕ್ತರು ಹುಂಡಿಗೆ ಹಾಕುವ ಹಣ, ವಿವಿಧ ಸೇವೆಗಳು, ಉತ್ಸವಗಳ ರಶೀದಿ ಹಣ, ಮುಡಿ ಸೇವೆ, ಅಂಗಡಿ ಬಾಡಿಗೆ ಇವೆಲ್ಲದರಿಂದ ಒಂದು ವರ್ಷ ಸರಾಸರಿ 90 ರಿಂದ 100 ಕೋಟಿ ರೂ. ಆದಾಯ ಪ್ರಾಧಿಕಾರಕ್ಕೆ ಬರುತ್ತಿದೆ. 2022ರ ಏಪ್ರಿಲ್‌ನಿಂದ 2023ರ ಮಾ.31ರ ಆರ್ಥಿಕ ವರ್ಷದಲ್ಲಿ ದೇವಾಲಯಕ್ಕೆ ಒಟ್ಟು 101 ಕೋಟಿ ರೂ. ಆದಾಯ ಬಂದಿತ್ತು. ಇದು ಒಂದು ವರ್ಷದ ಆದಾಯ. ದೇವಾಲಯದ ಆದಾಯ ಪ್ರತಿ ವರ್ಷ ಹೆಚ್ಚುತ್ತಲೇ ಇರುತ್ತದೆ. ಹೀಗೆ ಬರುವ ಆದಾಯದಿಂದ ಭಕ್ತರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ಜನರ ಒತ್ತಾಯ. ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆಯ ಅವಿಭಜಿತ ಮೈಸೂರು ಜಿಲ್ಲೆಯವರು. ಮಹದೇಶ್ವರನ ಭಕ್ತರು. ಅವರು ಮಲೆ ಮಹದೇಶ್ವರ ಬೆಟ್ಟದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಇದನ್ನೊಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾಳಜಿ ವಹಿಸಬೇಕೆಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಮದ್ಯ ಮಾರಾಟ : ಇದೊಂದು ಪವಿತ್ರ ಧಾರ್ಮಿಕ ಸ್ಥಳವಾಗಿದ್ದರೂ, ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದು ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದೆ. ವಸತಿ ಗೃಹಗಳ ಅಕ್ಕಪಕ್ಕದಲ್ಲಿ ಮದ್ಯದ ಪೌಚ್‌ಗಳು ಬಿದ್ದಿರುತ್ತವೆ. ಇಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂಬುದು ಅನೇಕ ಭಕ್ತಾದಿಗಳ ಒತ್ತಾಯವಾಗಿದೆ.
ಆಧುನಿಕ ಅಡುಗೆ ಕೋಣೆ ನಿರ್ಮಿಸಿ : ಬೆಟ್ಟಕ್ಕೆ ಬರುವ ಭಕ್ತರಿಗೆ ದಾಸೋಹ ಭವನದಲ್ಲಿ ಪ್ರತಿನಿತ್ಯ ಅನ್ನದಾನ ನಿರಂತರ ನಡೆಯುತ್ತಿದೆ. ದಾಸೋಹ ಭವನ ಇನ್ನಷ್ಟು ಸುವ್ಯವಸ್ಥಿತ, ಅಚ್ಚುಕಟ್ಟು ಆಗಬೇಕಿದೆ. ಭಕ್ತರಿಗೆ ಬಡಿಸುವ ಅನ್ನ ಸಾಂಬಾರಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬು ಭಕ್ತರ ಒತ್ತಾಯ. ಕೆಲವೊಮ್ಮೆ ಅನ್ನ ಮುದ್ದೆಯಾಗಿದ್ದು, ಸಾಂಬಾರಿನಲ್ಲಿ ತರಕಾರಿಯೇ ಇರುವುದಿಲ್ಲ ಎಂಬ ದೂರಿದೆ. ಇದಕ್ಕಿಂತ ಹೆಚ್ಚಾಗಿ ಅಡುಗೆ ಮಾಡುವ ಜಾಗ ಇನ್ನೂ ಹಳೆಯ ವ್ಯವಸ್ಥೆಯಂತಿದೆ. ಬಾಯ್ಲರ್ ಗಳಿರುವ ಜಾಗದಲ್ಲಿ ಆಧುನಿಕ ಅಡುಗೆ ವ್ಯವಸ್ಥೆ ಇಲ್ಲ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರೇ ಅಡುಗೆ ಮನೆ ನೋಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಧರ್ಮಸ್ಥಳ ಮಾದರಿಯಲ್ಲಿ ಆಧುನಿಕ ರೀತಿಯ ಅಡುಗೆ ಮನೆಯನ್ನು ನಿರ್ಮಿಸಿ, ಅಡುಗೆಯನ್ನು ಇನ್ನಷ್ಟು ಹೈಜೀನ್ ಆಗಿ ತಯಾರಿಸುವ ವ್ಯವಸ್ಥೆ ಆಗಬೇಕಿದೆ. ಲಾಡು ಮಾಡಿದ ನಂತರ ಅದನ್ನು ನೆಲದ ಮೇಲೆ ಗುಡ್ಡೆ ಹಾಕಲಾಗುತ್ತದೆ. ಕಟ್ಟಿದ ಲಾಡುಗಳನ್ನು ದೊಡ್ಡ ಪಾತ್ರೆಗಳಿಗೆ ಹಾಕಬಹುದಾಗಿದೆ. ಅಲ್ಲದೇ, ಲಾಡನ್ನು ಬರಿಗೈಯಲ್ಲಿ ಕಟ್ಟಲಾಗುತ್ತಿದ್ದು, ಇದು ಅನೈರ್ಮಲ್ಯಕ್ಕೆಡೆಮಾಡುತ್ತದೆ. ಆದ್ದರಿಂದ ಗ್ಲೌಸ್ ಧರಿಸಿ ಲಾಡು ಉಂಡೆ ಕಟ್ಟಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅದರ ಪ್ರಸಿದ್ಧಿಗೆ ಅನುಗುಣವಾಗಿ ಮೂಲಸೌಕರ್ಯಗಳಿಲ್ಲ. ಸ್ವತ್ಛತೆ ಇಲ್ಲ. ಬಡ ಭಕ್ತರು ಉಳಿದುಕೊಳ್ಳಲು ಉಚಿತ ಅಥವಾ ಕಡಿಮೆ ದರದ ಕೋಣೆಗಳ ವ್ಯವಸ್ಥೆ ಇಲ್ಲ. ಸರತಿ ಸಾಲಿನಲ್ಲಿ ಬಿರುಬಿಸಿಲಿನಲ್ಲಿ ಕಾದು ನಿಲ್ಲಬೇಕು. ಇಂಥ ಅನೇಕ ಸಮಸ್ಯೆಗಳನ್ನು ಪರಿಹರಿಸಬೇಕು. ●ಭಗತ್ ಸತ್ಯ, ಕೊಳ್ಳೇಗಾಲ.
ನಾನು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ನಾಲ್ಕೈದು ದಿನಗಳಷ್ಟೇ ಆಗಿವೆ. ಭಕ್ತರು ಬಿಸಿಲಿನಲ್ಲಿ ಸಾಲಿನಲ್ಲಿ ನಿಲ್ಲಬೇಕಾದ ಸಮಸ್ಯೆ ಗೊತ್ತಾಗಿದೆ. ಅಲ್ಲದೇ, ಇನ್ನಿತರ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇನೆ. ●ಗೀತಾ ಹುಡೇದ, ಕಾರ್ಯದರ್ಶಿ, ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ.
–ಕೆ.ಎಸ್.ಬನಶಂಕರ ಆರಾಧ್ಯ