Advertisement

ರಾಜ್ಯಕ್ಕೆ ಮಲೇಷ್ಯಾ ಮರಳು, ಲೋಡ್‌ಗೆ 35 ಸಾವಿರ

10:20 AM Aug 08, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಮರಳು ಅಭಾವ ನೀಗಿಸಲು ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ಪ್ರತಿ ಲೋಡ್‌ 35 ಸಾವಿರ ರೂ. ದರದಲ್ಲಿ ಲಭ್ಯವಾಗಲಿದೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಸಂಸ್ಥೆಯು ಮರಳು ಆಮದು ಮತ್ತು ಪೂರೈಕೆ ಹೊಣೆಗಾರಿಕೆ ನಿಭಾಯಿಸಲಿದ್ದು, ಅಗತ್ಯ ಇರುವವವರಿಗೆ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಗುತ್ತಿಗೆದಾರರ ಲೈಸೆನ್ಸ್‌ ಪರಿಶೀಲಿಸಿ “ಪಡಿತರ’ ಮಾದರಿಯಲ್ಲಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮರಳು ಕೊರತೆ ನೀಗಿಸಲು ಬರ್ಮಾ, ಮಲೇಷ್ಯಾ ಸೇರಿ ಹಲವು ದೇಶಗಳಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಿ ಟೆಂಡರ್‌ ಕರೆಯಲಾಗಿತ್ತು. ಮಲೇಷ್ಯಾ ಸಂಸ್ಥೆಯೊಂದು ಮರಳು ಪೂರೈಕೆ ಮಾಡಲು ಟೆಂಡರ್‌ನಲ್ಲಿ ಭಾಗವಹಿಸಿದೆ. ಸಾಗಣೆ ವೆಚ್ಚ ಸೇರಿ ಪ್ರತಿ ಟನ್‌ 3500
ರೂ.ನಂತೆ ಒಂದು ಲಾರಿ ಲೋಡ್‌ (10 ಟನ್‌) 35000 ರೂ. ಸಾರ್ವಜನಿಕರಿಗೆ ದೊರೆಯಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಲೋಡ್‌ ಮರಳು 80 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡರೆ ಶೇ.50 ರಷ್ಟು ಬೆಲೆಗೆ
ಸಿಗಲಿದೆ ಎಂದು ಹೇಳಿದರು. 

ಒಂದು ಹಡಗಿನಲ್ಲಿ 40 ರಿಂದ 50 ಸಾವಿರ ಮೆಟ್ರಿಕ್‌ ಟನ್‌ಗಳಷ್ಟು ಮರಳು ಬರಲಿದ್ದು, ರಾಜ್ಯದ ಬೇಡಿಕೆಗೆ ಅಗತ್ಯವಾಗುವಷ್ಟು ಮರಳು ಲಭ್ಯವಾಗಲಿದೆ. ಈ ಮರಳನ್ನು ಜಿಲ್ಲಾ ಕೇಂದ್ರಗಳಿಗೆ ಪೂರೈಕೆ ಮಾಡಲಾಗುವುದು, ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಅದರ ವಿತರಣೆ ಜವಾಬ್ದಾರಿ ತೆಗೆದುಕೊಳ್ಳಲಿದೆ. ಆ ಮೂಲಕ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಮರಳು ನೀತಿ ರಾಜ್ಯದಲ್ಲಿ ಈಗಾಗಲೇ ಜಾರಿಯಾಗಿದ್ದು, ಕ್ವಾರಿಗಳಲ್ಲಿ ಹಾಗೂ ವನ್ಯಜೀವಿ ಧಾಮ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಕೆಲವು ನಿರ್ಬಂಧಗಳಿದ್ದವು. ಕ್ವಾರಿ ಪ್ರದೇಶದಲ್ಲಿ ಮರಳು ತೆಗೆಯಲು ಈಗಾಗಲೇ ನಿಯಮ ಸರಳೀಕರಣ ಮಾಡಲಾಗಿದೆ. ಇನ್ನು ವನ್ಯಜೀವಿ ಧಾಮದಲ್ಲಿ ಮರಳು ತೆಗೆಯಲು ಅವಕಾಶ ಕೋರಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Advertisement

ಮರಳು ಗಣಿಗಾರಿಕೆ ಸಂಬಂಧ ಕರಾವಳಿ ಭಾಗಕ್ಕೆ ಪ್ರತ್ಯೇಕ ನಿಯಮಾವಳಿ ರೂಪಿಸುವ ಬಗ್ಗೆಯೂ ಚರ್ಚೆಗಳು ನಡೆದಿದ್ದು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next