ಕೌಲಾಲಂಪುರ : ಸುಧಾರಣಾವಾದಿ ಅನ್ವರ್ ಇಬ್ರಾಹಿಂ ಅವರಿಗೆ ರಾಜ ಕ್ಷಮಾದಾನ ದೊರಕಿರುವ ಹಿನ್ನೆಲೆಯಲ್ಲಿ ಮಲೇಶ್ಯದಲ್ಲಿ ಹೊಸ ಬೆಳಗು ಆರಂಭಗೊಂಡಿದೆ.
ರಾಜಕೀಯ ಕೈದಿಯಾಗಿದ್ದ ಅನ್ವರ್ ಇಬ್ರಾಹಿಂ ಅವರ ಮೈತ್ರಿ ಕೂಟ ಈಚಿನ ಮಹಾ ಚುನಾವಣೆಯಲ್ಲಿ ಅಚ್ಚರಿಯ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಅವರನ್ನು ಇಂದು ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ.
70ರ ಹರೆಯದ ಅನ್ವರ್ ಅವರನ್ನು 2015ರಲ್ಲಿ ಅನೈಸರ್ಗಿಕ ಲೈಂಗಿಕ ಅಪರಾಧಕ್ಕಾಗಿ ಶಿಕ್ಷಿಸಲಾಗಿತ್ತು. ಆದರೆ ಅವರಿಗೆ ಶಿಕ್ಷೆ ಕೊಡಿಸುವ ಮೂಲಕ ಅವರ ಮೈತ್ರಿಕೂಟವನ್ನು ಚಚ್ಚಿ ಹಾಕುವುದು ಎದುರಾಳಿಗಳ ರಾಜಕೀಯ ದುರುದ್ದೇಶವಾಗಿತ್ತು ಎಂದು ಹೇಳಲಾಗಿದೆ.
ಅನ್ವರ್ ಅವರ ಮೈತ್ರಿಕೂಟ ಮಲೇಶ್ಯವನ್ನು ದೀರ್ಘ ಕಾಲದಿಂದ ಆಳುತ್ತಿರುವ ಸಮ್ಮಿಶ್ರ ಸರಕಾರದ ವಿರುದ್ಧ ಈಚಿನ ಚುನಾವಣೆಯಲ್ಲಿ ಅಚ್ಚರಿಯ ವಿಜಯ ದಾಖಲಿಸಿತ್ತು. ಅಂತೆಯೇ ಭಾವೀ ಪ್ರಧಾನಿ ಅನ್ವರ್ ಅವರನ್ನು ಬಂಧ ಮುಕ್ತಗೊಳಿಸಲಾಗಿತ್ತು. ಅವರ ಜೈಲು ಶಿಕ್ಷೆಯು ಜೂನ್ 8ರಂದು ಮುಗಿಯುವುದಿತ್ತು.
ಅನ್ವರ್ ಮೈತ್ರಿಕೂಟದ ವಿಜಯದಿಂದಾಗಿ ಮಲೇಶ್ಯವನ್ನು 60 ವರ್ಷಗಳಿಂದ ಆಳುತ್ತಿದ್ದ ನ್ಯಾಶನಲ್ ಫ್ರಂಟ್ ಆಡಳಿತೆ ಕೊನೆಗೊಂಡಿದೆ.