ಕೌಲಾಲಂಪುರ್: ರಕ್ತ ನೀಡಿ ಜೀವ ಉಳಿಸಿ, ನಾಪತ್ತೆಯಾಗಿದ್ದಾರೆ..ದಯವಿಟ್ಟು ಇವರ ಪತ್ತೆಗೆ ಸಹಕರಿಸಿ ಹೀಗೆ ನೂರಾರು ವಿಧದ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ತಾನು ಬದುಕಬೇಕಾ ಅಥವಾ ಸಾಯಬೇಕಾ? ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಸಮೀಕ್ಷೆ ನಡೆಸಿ ಹುಡುಗಿಯೊಬ್ಬಳು ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ವಿಲಕ್ಷಣ ಘಟನೆಯೊಂದು ಮಲೇಶ್ಯಾದಲ್ಲಿ ನಡೆದಿದೆ!
ಘಟನೆ ವಿವರ:
ಸಾರಾವಾಕ್ ಪೊಲೀಸರ ಮಾಹಿತಿ ಪ್ರಕಾರ, ಮೇ 13ರಂದು 16 ವರ್ಷದ ಹುಡುಗಿಯೊಬ್ಬಳು ಇನ್ಸ್ ಸ್ಟಾಗ್ರಾಮ್ ಫೋಟೋ ಶೇರಿಂಗ್ ಆ್ಯಪ್ ನಲ್ಲಿ “ ಇದು ತುಂಬಾ ಮುಖ್ಯವಾದದ್ದು..ನನಗೆ D/L ಆಯ್ಕೆ ಮಾಡಲು ನೆರವು ನೀಡಿ” ಎಂದು ಪ್ರಶ್ನೆ ಕೇಳಿದ್ದಳು.
ಇನ್ಸ್ ಸ್ಟಾಗ್ರಾಮ್ ಸಮೀಕ್ಷೆ ಪ್ರಕಾರ ಬಾಲಕಿಯ ಶೇ.69ರಷ್ಟು ಫಾಲೋವರ್ಸ್ “ಡಿ” ಆಯ್ಕೆ ಮಾಡಿಕೊಳ್ಳಲು ಸಹಮತ ಸೂಚಿಸಿದ್ದರು! ಆ ಬಳಿಕ ಹುಡುಗಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು!
ಸಂತ್ರಸ್ತೆ ಹುಡುಗಿಯ ಆಪ್ತ ಗೆಳೆಯರ ಪ್ರಕಾರ, ಡಿ/ಎಲ್ ಅಂದರೆ ಡೆತ್ ಆ್ಯಂಡ್ ಲೈಫ್! ಎಂಬುದಾಗಿ ವಿವರಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಐದಿಲ್ ಬೋಲ್ಹಾಸ್ಸಾನ್ ತಿಳಿಸಿರುವುದಾಗಿ ದ ಬೋರ್ನಿಯೋ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಈ ಪ್ರಕರಣದ ಬಗ್ಗೆ ಮಾತನಾಡಿರುವ ವಕೀಲ, ಸಂಸತ್ ಸದಸ್ಯ ರಾಮ್ ಕರ್ಪಾಲ್ ಸಿಂಗ್, ಇನ್ಸ್ ಸ್ಟಾಗ್ರಾಮ್ ನಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯಾರು ವೋಟ್ ಹಾಕಿದ್ದಾರೋ ಅವರೇ ಕಾರಣರಾಗುತ್ತಾರೆ. ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮಲೇಶ್ಯಾದ ಕಾನೂನಿನ ಪ್ರಕಾರ ಅಪ್ರಾಪ್ತೆಯ ಆತ್ಮಹತ್ಯೆಗೆ ಯಾರು ಪ್ರೇರಣೆ ನೀಡುತ್ತಾರೋ..ಅವರು ದೋಷಿ ಎಂದು ಸಾಬೀತಾದರೆ ಮರಣದಂಡನೆ ಅಥವಾ 20 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.