ಬೆಂಗಳೂರು: ಮಲೇಷ್ಯಾ ಮರಳು ಆಮದು ಕುರಿತಂತೆ ಮರಳಿನ ಗುಣಮಟ್ಟ, ಇತರ ಅಂಶಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಶುಕ್ರವಾರ ವಿಕಾಸಸೌಧದ ಕಚೇರಿಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡಿಕೆಯಿರುವಷ್ಟು ಮರಳು ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಎಂಎಸ್‌ಐಎಲ್ ಮೂಲಕ ಆಮದು ಮಾಡಿಕೊಂಡ ಮಲೇಷ್ಯಾ ಮರಳಿನ ಗುಣಮಟ್ಟದ ಬಗ್ಗೆ ಪರಿಶೀಲಿಸಬೇಕಿದೆ. ಇದರಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿದ್ದರೆ, ಲೋಪಗಳಾಗಿದ್ದರೆ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.
ರಾಜ್ಯದಲ್ಲಿ ಎಲ್ಲಿಯೂ ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಯಾವುದೇ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಜರಗಿಸಲಾಗುವುದು. ಮರಳು ಗಣಿಗಾರಿಕೆ ಬ್ಲಾಕ್‌ಗಳನ್ನು ಮರು ಹಂಚಿಕೆ ಮಾಡಲಾಗುವುದು. ಕಲ್ಲು ಗಣಿಗಾರಿಕೆ ಪ್ರದೇಶಗಳ ಸರ್ವೇ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ವರದಿ ಸಲ್ಲಿಕೆ ಬಳಿಕ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಭಾಗದಲ್ಲಿ ನದಿಗಳು ವರ್ಷಪೂರ್ತಿ ಹರಿಯುತ್ತವೆ. ನೀರಿನಲ್ಲಿ ಆಳ ಮರಳು ಗಣಿಗಾರಿಕೆ (ಇನ್‌ಸ್ಟ್ರೀಮ್ ಸ್ಯಾಂಡ್ ಮೈನಿಂಗ್) ಕುರಿತಂತೆ ಈಗಾಗಲೇ ತಂಡವೊಂದು ಗುಜರಾತ್‌ಗೆ ಭೇಟಿ ನೀಡಿ ಹಿಂತಿರುಗಿದ್ದು, ವರದಿ ಸಲ್ಲಿಸಿದ ಬಳಿಕ ಪರಿಶೀಲಿಸಲಾಗುವುದು ಎಂದು ಹೇಳಿದರು.