ಕೌಲಾಲಂಪುರ: ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಅವರು ತಮ್ಮ ಎದುರಾಳಿಯೆದುರು ಗೆಲುವು ಸಾಧಿಸಿ ಮಲೇಷ್ಯ ಮಾಸ್ಟರ್ ಸೂಪರ್ 500 ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು.
ಆರನೇ ಶ್ರೇಯಾಂಕದ ಸಿಂಧು ವನಿತೆಯರ ಸಿಂಗಲ್ಸ್‌ನಲ್ಲಿ ಜಪಾನಿನ ಆಯಾ ಒಹೋರಿ ಅವರನ್ನು ಕೇವಲ 40 ನಿಮಿಷಗಳ ಹೋರಾಟದಲ್ಲಿ 21-16, 21-11 ಗೇಮ್‌ಗಳಿಂದ ಉರುಳಸಿದರು. ಇದು ಒಹೋರಿ ವಿರುದ್ಧ ಸಿಂಧು ದಾಖಲಿಸಿದ 13ನೇ ಗೆಲುವು ಆಗಿದೆ. ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಚೀನದ ಯಿ ಮ್ಯಾನ್ ಝಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.
ವಿಶ್ವದ 9ನೇ ರ್‍ಯಾಂಕಿನ ಪ್ರಣಯ್ ಮೊದಲ ಗೇಮ್‌ನಲ್ಲಿ ಸೋತಿದ್ದರೂ ಅಮೋಘವಾಗಿ ಆಡಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನದ ಶಿ ಫೆಂಗ್ ಲಿ ಅವರನ್ನು 13-21, 21-16, 21-11 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಜಪಾನಿನ ಕೆಂಟ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ. ನಿಶಿಮೊಟೊ ಅವರು 2022ರ ಜಪಾನ್ ಓಪನ್ ಮತ್ತು ಈ ವರ್ಷದ ಸ್ಪೇಯ್ನ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ ಸಾಧಕರಾಗಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ಅವರು ಇಂಡಿಯಾ ಓಪನ್ ಚಾಂಪಿಯನ್ ಥಾಯ್ಲೆಂಡಿನ ಕುನವುಟ್ ವಿಟಿಸರ್ನ್ ಅವರನ್ನು 21-19, 21-19 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದರು. 2021ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲಿ ಇಂಡೋನೇಶ್ಯದ ಅರ್ಹತಾ ಆಟಗಾರ ಕ್ರಿಸ್ಟಿಯನ್ ಅದಿನಾಟ ಅವರನ್ನು ಎದುರಿಸಲಿದ್ದಾರೆ.