Advertisement

Malaysia Master Super 500: ಪ್ರಶಸ್ತಿ ಜಯಿಸಿದ ಎಚ್‌.ಎಸ್‌. ಪ್ರಣಯ್‌

11:11 PM May 28, 2023 | Team Udayavani |

ಕೌಲಾಲಂಪುರ: ಭಾರತದ ಎಚ್‌.ಎಸ್‌. ಪ್ರಣಯ್‌ ಚೊಚ್ಚಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಪ್ರಶಸ್ತಿಯೊಂದಿಗೆ ಸಂಭ್ರಮಿಸಿ ದ್ದಾರೆ. ಕೌಲಾಲಂಪುರದಲ್ಲಿ ನಡೆದ “ಮಲೇಷ್ಯಾ ಮಾಸ್ಟರ್ ಸೂಪರ್‌ 500” ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಅವರ 6 ವರ್ಷಗಳ ಪ್ರಶಸ್ತಿ ಬರ ನೀಗಿದೆ. ಹಾಗೆಯೇ ಭಾರತಕ್ಕೆ ವರ್ಷದ ಮೊದಲ ಬ್ಯಾಡ್ಮಿಂ ಟನ್‌ ಸಿಂಗಲ್ಸ್‌ ಪ್ರಶಸ್ತಿ ಒಲಿದಿದೆ.

Advertisement

ರವಿವಾರ ನಡೆದ ಜಿದ್ದಾಜಿದ್ದಿ ಫೈನಲ್‌ನಲ್ಲಿ 30 ವರ್ಷದ ಎಚ್‌.ಎಸ್‌. ಪ್ರಣಯ್‌ 21-19, 13-21, 21-18ರಿಂದ ಚೀನದ ವೆಂಗ್‌ ಹಾಂಗ್‌ ಯಾಂಗ್‌ ಅವರನ್ನು ಮಣಿಸಿದರು. ಬರೋಬ್ಬರಿ 94 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ವೆಂಗ್‌ ಹಾಂಗ್‌ ಯಾಂಗ್‌ 34ನೇ ರ್‍ಯಾಂಕಿಂಗ್‌ ಆಟಗಾರನಾಗಿದ್ದು, 2022ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಕಳೆದ ವರ್ಷ ಭಾರತದ ಐತಿಹಾಸಿಕ “ಥಾಮಸ್‌ ಕಪ್‌’ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಣಯ್‌, ಸಿಂಗಲ್ಸ್‌ ಸಾಧನೆಯಲ್ಲಿ ಬಹಳ ಹಿಂದುಳಿದಿದ್ದರು. 2017ರ ಯುಎಸ್‌ ಓಪನ್‌ ಗ್ರ್ಯಾನ್‌ಪ್ರಿ ಚಿನ್ನದ ಪದಕ ಗೆದ್ದ ಬಳಿಕ ಪ್ರಶಸ್ತಿಯ ಬರಗಾಲದಲ್ಲಿದ್ದರು. ಕಳೆದ ವರ್ಷ ಸ್ವಿಸ್‌ ಓಪನ್‌ ಫೈನಲ್‌ ಪ್ರವೇಶಿಸಿದರೂ ಪ್ರಶಸ್ತಿ ಮರೀಚಿಕೆಯೇ ಆಗುಳಿದಿತ್ತು. ಬಳಿಕ ಮಲೇಷ್ಯಾ ಮತ್ತು ಸಿಂಗಾಪುರ್‌-1000 ಕೂಟದ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದರು.

ಪ್ರಬಲ ಸವಾಲು
ಕೇರಳದವರಾದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌ಗೆ ಚೀನದ 23 ವರ್ಷದ ಶಟ್ಲರ್‌ ಪ್ರಬಲ ಸವಾಲೊಡ್ಡಿದರು. ಪ್ರಣಯ್‌ ಕೇವಲ 2 ಅಂಕಗಳ ಅಂತರದಲ್ಲಿ ಮೊದಲ ಗೇಮ್‌ ವಶಪಡಿಸಿಕೊಂಡರು. ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದ ವೆಂಗ್‌ ಹಾಂಗ್‌ ಯಾಂಗ್‌ 21-13ರಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ ಮತ್ತೆ ಬಿರುಸಿನಿಂದ ಸಾಗಿತು. ಅದೃಷ್ಟ ಭಾರತೀಯನ ಕೈ ಹಿಡಿಯಿತು.

ಪ್ರಶಸ್ತಿಯ ಹಾದಿಯಲ್ಲಿ ಎಚ್‌.ಎಸ್‌. ಪ್ರಣಯ್‌ ವಿಶ್ವದ 5ನೇ ರ್‍ಯಾಂಕಿಂಗ್‌ ಆಟಗಾರ ಚೌ ತೀನ್‌ ಚೆನ್‌, ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಲೀ ಶಿ ಫೆಂಗ್‌ ಹಾಗೂ ಜಪಾನ್‌ನ ಪ್ರಬಲ ಆಟಗಾರ ಕೆಂಟ ನಿಶಿಮೊಟೊ ಅವರನ್ನು ಸೋಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next